ಬೆಂಗಳೂರು: ವಾಹನಗಳ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ (ಎಟಿಎಸ್) ಸ್ಥಾಪನೆಗೆ ಇನ್ನೂ ಸಮಯ ಬೇಕಿರುವುದರಿಂದ ಸ್ವಯಂಚಾಲಿತ ಸದೃಢ (ಫಿಟ್‌ನೆಸ್) ಪರೀಕ್ಷೆ ಜಾರಿ ಮುಂದಕ್ಕೆ ಹೋಗಿದೆ. ಈ ವರ್ಷ ಅನುಷ್ಠಾನಗೊಳ್ಳುವುದು ಅನುಮಾನವಾಗಿದೆ.
ಮಾಲಿನ್ಯ, ತೈಲ ಸೋರಿಕೆ, ಬ್ರೇಕ್, ಲೈಟ್‌ಗಳು, ಚಕ್ರ ಜೋಡಣೆ, ಸ್ಪೀಡ್ ಗವರ್ನರ್ ಇತ್ಯಾದಿಗಳನ್ನು ಪರಿಶೀಲಿಸಿದ ನಂತರವೇ ಸದೃಢ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸದ್ಯ ಸಿಬ್ಬಂದಿಯೇ ಈ ಪ್ರಕ್ರಿಯೆ ನಡೆಸುವುದರಿಂದ ಕೆಲವೊಮ್ಮೆ ಪ್ರಭಾವ, ಆಮಿಷ ಮತ್ತಿತರ ಕಾರಣಗಳಿಂದ ದೋಷಗಳು ಉಂಟಾಗುತ್ತಿವೆ. ಇದನ್ನು ತಪ್ಪಿಸಲು ಮಾನವ ಹಸ್ತಕ್ಷೇಪ ಇಲ್ಲದೆ ವಾಹನಗಳನ್ನು ಸ್ವಯಂಚಾಲಿತವಾಗಿ ಪರೀಕ್ಷೆ ನಡೆಸುವ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2019ರಲ್ಲಿ ರೂಪಿಸಿತ್ತು.
2021ರಿಂದಲೇ ಎಟಿಎಸ್ ಕಾರ್ಯಾಚರಣೆ ಜಾರಿ ಮಾಡಲು ನಿರ್ಧರಿಸಿತ್ತು. ಕೋವಿಡ್ ಕಾರಣದಿಂದ ಎರಡು ವರ್ಷ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. 2023ರ ಏಪ್ರಿಲ್ 1ರಿಂದ ಎಟಿಎಸ್ ಅನುಷ್ಠಾನಗೊಳಿಸುವಂತೆ 2022ರಲ್ಲಿ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿತ್ತು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಟಿಎಸ್ ಅನುಷ್ಠಾನಕ್ಕೆ ಬಂದಿರಲಿಲ್ಲ. ಅಕ್ಟೋಬರ್ 1ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಸ್ವಯಂಚಾಲಿತ ಫಿಟ್‌ನೆಸ್ ಪರೀಕ್ಷೆ ಜಾರಿ ಮಾಡಬೇಕು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತೆ ಗಡುವು ನೀಡಿತ್ತು. ಅದರಂತೆ ರಾಜ್ಯದಲ್ಲಿ ಕೆಲವು ಕಡೆ ಎಟಿಎಸ್ ಆರಂಭಗೊಂಡರೂ ಹಲವು ಕಡೆಗಳಲ್ಲಿ ಇನ್ನಷ್ಟು ಸಮಯ ಬೇಕಿರುವುದರಿಂದ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ನಮ್ಮಲ್ಲಿ ಎರಡು ಮಾದರಿಗಳಲ್ಲಿ ಎಟಿಎಸ್ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ವಿನ್ಯಾಸ, ನಿರ್ಮಾಣ, ಹೂಡಿಕೆ, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್‌ಒಟಿ) ಮೊದಲನೆಯದ್ದು. ಎಟಿಎಸ್ ತೆರೆಯಲು ಬೇಕಾದಷ್ಟು (2 ಎಕರೆ) ಜಮೀನು ಇರುವ ನಮ್ಮ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನಾವು ಜಮೀನು ನೀಡುತ್ತೇವೆ. ಗುತ್ತಿಗೆ ಪಡೆದವರು ಅಲ್ಲಿ ಎಟಿಎಸ್ ಆರಂಭಿಸುವುದನ್ನು ಡಿಬಿಎಫ್‌ಒಟಿ ಎಂದು ಕರೆಯಲಾಗುತ್ತದೆ. ನಿರ್ಮಾಣ, ಮಾಲೀಕತ್ವ, ಕಾರ್ಯಾಚರಣೆ (ಬಿಒಒ) ಮಾದರಿ ಎರಡನೆಯದ್ದು. ಆರ್‌ಟಿಒಗೆ ಸಂಬಂಧಿಸಿದ ಜಮೀನು ಇಲ್ಲದ ಕಡೆಗಳಲ್ಲಿ ಗುತ್ತಿಗೆ ಪಡೆದವರು ಖಾಸಗಿ ಜಮೀನಿನಲ್ಲಿ ಎಟಿಎಸ್ ತೆರೆಯುವುದಾಗಿದೆ’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ವಿವರ ನೀಡಿದರು.
‘ಅರ್ಹತಾ ಪತ್ರ ನವೀಕರಣಕ್ಕಾಗಿ ಬರುವ ವಾಹನಗಳನ್ನು ಕಡ್ಡಾಯವಾಗಿ ಎಟಿಎಸ್ ಮೂಲಕ ತಪಾಸಣೆಗೆ ಒಳಪಡಿಸಬೇಕಾಗಿರುತ್ತದೆ. ಅದಕ್ಕಾಗಿ ಜಮೀನು ಲಭ್ಯ ಇರುವ 13 ಕಡೆಗಳಲ್ಲಿ ಡಿಬಿಎಫ್‌ಒಟಿ ಮಾದರಿಯಲ್ಲಿ, 19 ಕಡೆಗಳಲ್ಲಿ ಬಿಒಒ ಮಾದರಿಯಲ್ಲಿ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸ್ಮಾರ್ಟ್ ಡಿಎಲ್ (ಚಾಲನಾ ಪರವಾನಗಿ), ಆರ್‌ಸಿ (ನೋಂದಣಿ ಪ್ರಮಾಣಪತ್ರ) ಜಾರಿಯಾಗುವ ಹೊತ್ತಿಗೆ ಎಟಿಎಸ್ ಕೂಡ ಅನುಷ್ಠಾನಗೊಳ್ಳಲಿದೆ’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.