ADVERTISEMENT

ಬಾಲ್ಯ ವಿವಾಹ ಮುಕ್ತ ಗ್ರಾ.ಪಂಗಳಿಗೆ ಪುರಸ್ಕಾರ: ಎಂ.ಆರ್. ರವಿ

ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಎಂ.ಆರ್.ರವಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:41 IST
Last Updated 10 ಜುಲೈ 2024, 15:41 IST
'ಬಾಲ್ಯ ವಿವಾಹಗಳನ್ನು ತಡೆಗಟ್ಟಲು ರಾಜ್ಯಮಟ್ಟದ ವಕೀಲಿ ತರಬೇತಿ' ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಎಂ.ಆರ್ ರವಿ ಅವರು ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆಯ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. -ಪ್ರಜಾವಾಣಿ ಚಿತ್ರ
'ಬಾಲ್ಯ ವಿವಾಹಗಳನ್ನು ತಡೆಗಟ್ಟಲು ರಾಜ್ಯಮಟ್ಟದ ವಕೀಲಿ ತರಬೇತಿ' ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಎಂ.ಆರ್ ರವಿ ಅವರು ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆಯ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೋಕ್ಸೊ ಪ್ರಕರಣ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಗಳನ್ನು ಮುಕ್ತಗೊಳಿಸುವ ಗ್ರಾಮ ಪಂಚಾಯಿತಿಗಳನ್ನು ಪುರಸ್ಕರಿಸಲು ನಿರ್ಧರಿಸಲಾಗಿದೆ’ ಎಂದು ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಎಂ.ಆರ್. ರವಿ ಹೇಳಿದರು.

ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಬಾಲ್ಯ ವಿವಾಹಗಳನ್ನು ತಡೆಗಟ್ಟಲು ರಾಜ್ಯಮಟ್ಟದ ವಕೀಲಿ ತರಬೇತಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗಾಗಿ ಹೋರಾಡುವವರನ್ನು ಗೌರವಿಸುವ ಹಾಗೂ ದೌರ್ಜನ್ಯಕ್ಕೊಳಗಾಗುವ ಮಕ್ಕಳನ್ನು ರಕ್ಷಿಸುವ ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ‘ಮಕ್ಕಳ ರಕ್ಷಣೆ ಪ್ರಶಸ್ತಿ’ ನೀಡಲಾಗುವುದು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಬಾಲ್ಯ ವಿವಾಹದಂತಹ ಮೌಢ್ಯ ಪದ್ಧತಿ ನಿರ್ಮೂಲನೆಗಾಗಿ ಇಂಥದ್ದೊಂದು ಆರೋಗ್ಯಕರ ಸ್ಪರ್ಧೆ ಏರ್ಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ನೆದರ್ಲೆಂಡ್‌ನಲ್ಲಿರುವ ಟೆರ‍್ರೆಡೆಸ್‌ ಹೋಮ್ಸ್‌ನ ಭಾರತ ಮತ್ತು ನೇಪಾಳದ ರಾಷ್ಟ್ರೀಯ ನಿರ್ವಾಹಕ ಡಾ. ತಂಗಪೆರುಮಾಳ್ ಪೋನ್‌ಪಾಂಡಿ, ವಿದ್ಯಾನಿಕೇತನದ ನಿರ್ದೇಶಕ ನಾಗರಾಜ್, ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ ಶರ್ಮಾ ಎನ್‌.ವಿ. ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆಯ ಸದಸ್ಯರು, ಬಾಲ್ಯ ವಿವಾಹದಿಂದಾಗುವ ಸಮಸ್ಯೆಗಳ ಕುರಿತು ಅನುಭವ ಹಂಚಿಕೊಂಡರು. ಈ ಮೌಢ್ಯ ಪದ್ಧತಿಯ ನಿರ್ಮೂಲನೆಗಾಗಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಸಹಾಯವಾಣಿ ಪ್ರಚುರಪಡಿಸಿ ಬಾಲ್ಯ ವಿವಾಹ ತಡೆಗಾಗಿ ಮಕ್ಕಳ ಸಹಾಯವಾಣಿ–1098 ಅನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ಎಂ.ಆರ್‌. ರವಿ ಸಲಹೆ ನೀಡಿದರು. ‘1098 ಜೊತೆಗೆ ಇಆರ್‌ಎಸ್‌ಎಸ್‌ (ತುರ್ತು ಪ್ರತಿಕ್ರಿಯೆ ಬೆಂಬಲ) ವ್ಯವಸ್ಥೆಯಿರುವ 112 ಸಹಾಯವಾಣಿಯನ್ನೂ ಜೋಡಿಸಲಾಗಿದೆ. ಮಕ್ಕಳ ಮಾರಾಟ ಬಾಲ್ಯ ವಿವಾಹ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ದೂರುಗಳನ್ನು 1098ಕ್ಕೆ ಕರೆ ಮಾಡಿ ತಿಳಿಸಿದರೆ ಆ ಕರೆಯನ್ನು ತುರ್ತಾಗಿ 112ಕ್ಕೆ ವರ್ಗಾಯಿಸಲಾಗುತ್ತದೆ. ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.