ADVERTISEMENT

ಯುವ ಪೀಳಿಗೆಗೆ ಚನ್ನಮ್ಮನ ಇತಿಹಾಸದ ಅರಿವು: ಶಿವರಾಜ ತಂಗಡಗಿ

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:17 IST
Last Updated 23 ಅಕ್ಟೋಬರ್ 2024, 16:17 IST
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಣಿ ಚನ್ನಮ್ಮ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಶಿವರಾಜ ಎಸ್. ತಂಗಡಗಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಭಾಗವಹಿಸಿದ್ದರು - ಪ್ರಜಾವಾಣಿ ಚಿತ್ರ
ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಣಿ ಚನ್ನಮ್ಮ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಶಿವರಾಜ ಎಸ್. ತಂಗಡಗಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಭಾಗವಹಿಸಿದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಣಿ ಚನ್ನಮ್ಮ ಅವರು ಒಂದು ಸಮಾಜಕ್ಕೆ ಸೇರಿದವರಲ್ಲ. ಎಲ್ಲ ಸಮಾಜಗಳನ್ನು ಕಟ್ಟುವ ಕೆಲಸ ಮಾಡಿದ ವೀರ ವನಿತೆ. ಇಂತಹವರ ಜಯಂತಿ ಆಚರಿಸುವ ಮೂಲಕ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಲಾಗುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚನ್ನಮ್ಮ ಶೌರ್ಯ, ಧೈರ್ಯ, ತ್ಯಾಗ, ರಾಜನೀತಿ, ಮಾತೃವಾತ್ಸಲ್ಯ, ಸದ್ಗುಣಗಳ ಖನಿ. ಕನ್ನಡದ ಹೆಣ್ಣುಮಕ್ಕಳ ಪ್ರತಿನಿಧಿ. ಇಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಮಾಡಲಾಗುತ್ತಿದ್ದರೂ, ವಾಸ್ತವವಾಗಿ ಇದು ಕಿತ್ತೂರು ಸಂಸ್ಥಾನ ಬ್ರಿಟಿಷರ ವಿರುದ್ಧ ವಿಜಯೋತ್ಸವ ಸಾಧಿಸಿದ ದಿನವಾಗಿದೆ’ ಎಂದರು.

ADVERTISEMENT

‘ಬ್ರಿಟೀಷ್‌ ಕಲೆಕ್ಟರ್‌ ಥ್ಯಾಕರೆ ವಿರುದ್ಧ ಕಿತ್ತೂರು ರಾಣಿ ಚನ್ನಮ್ಮ ಜಯ ಸಾಧಿಸಿದ ದಿನ ಅಕ್ಟೋಬರ್‌ 23. ಇದೇ ದಿನ ಥ್ಯಾಕರೆಯ ಮರಣವೂ ಆಯಿತು. ಚನ್ನಮ್ಮ ಬ್ರಿಟಿಷರ ಮೇಲೆ ವಿಜಯ ಸಾಧಿಸಿದ ಈ ಐತಿಹಾಸಿಕ ದಿನವನ್ನೇ ಕಿತ್ತೂರ ರಾಣಿ ಚನ್ನಮ್ಮನ ಜಯಂತಿ ಎಂದು ಆಚರಿಸಲು 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿತ್ತು.  ಚನ್ನಮ್ಮ ಜಯಸಾಧಿಸಿ ಇಂದಿಗೆ 200 ವರ್ಷಗಳು ಪೂರ್ಣಗೊಂಡಿವೆ. ಹಾಗಾಗಿ ಈ ದಿನ ಮತ್ತು ಈ ಸಮಾರಂಭಕ್ಕೆ ವಿಶೇಷವಾದ ಮಹತ್ವ ಇದೆ’ ಎಂದರು.

ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಇಲಿಯಾಗಿ ಬಹುಕಾಲ ಪರಾಧೀನತೆಯಲ್ಲಿ ಬಾಳುವುದಕ್ಕಿಂತ ಹುಲಿಯಂತೆ ಸ್ವತಂತ್ರವಾಗಿ ಬದುಕಬೇಕು’ ಎಂಬ ನುಡಿಗೆ ಅನ್ವರ್ಥವಾಗಿ ಭಾರತ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಾ, ಬ್ರಿಟಿಷರಿಗೆ ನರಕದರ್ಶನ ಮಾಡಿಸಿದ ಮಹಾತಾಯಿ, ಕನ್ನಡದ ಕುಲನಾರಿ ಕಿತ್ತೂರು ರಾಣಿ ಚನ್ನಮ್ಮ’ ಎಂದು ಹೇಳಿ ಇತಿಹಾಸದ ದಿನಗಳನ್ನು ಮೆಲುಕು ಹಾಕಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.