ADVERTISEMENT

ಉತ್ತಮ ಹವ್ಯಾಸಗಳಿಂದ ಮಾನಸಿಕ ಆರೋಗ್ಯ ರಕ್ಷಣೆ: ರಂಗಕರ್ಮಿ ಆರುಂಧತಿ ನಾಗ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 16:14 IST
Last Updated 15 ಅಕ್ಟೋಬರ್ 2024, 16:14 IST
ನಿಮ್ಹಾನ್ಸ್‌ನಲ್ಲಿ ಏರ್ಪ‍ಡಿಸಿದ್ದ ಮಾನಸಿಕ ಆರೋಗ್ಯ ಸಂತೆ ಕಾರ್ಯಕ್ರಮದ ಮಳಿಗೆಗೆ ರಂಗಕರ್ಮಿ ಆರುಂಧತಿ ನಾಗ್ ಭೇಟಿ ನೀಡಿದ್ದರು. ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಡಾ. ಕೆ.ಎಸ್.ಮೀನಾ ಇದ್ದರು
ನಿಮ್ಹಾನ್ಸ್‌ನಲ್ಲಿ ಏರ್ಪ‍ಡಿಸಿದ್ದ ಮಾನಸಿಕ ಆರೋಗ್ಯ ಸಂತೆ ಕಾರ್ಯಕ್ರಮದ ಮಳಿಗೆಗೆ ರಂಗಕರ್ಮಿ ಆರುಂಧತಿ ನಾಗ್ ಭೇಟಿ ನೀಡಿದ್ದರು. ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಡಾ. ಕೆ.ಎಸ್.ಮೀನಾ ಇದ್ದರು   

ಬೆಂಗಳೂರು: ಜೀವನದಲ್ಲಿ ಉತ್ತಮ ಹವ್ಯಾಸ ಬೆಳೆಸಿಕೊಂಡರೆ ಮಾನಸಿಕ ಸಮಸ್ಯೆಗಳಿಂದ ಹೊರ ಬರಲು ಸಹಕಾರಿಯಾಗಲಿದೆ ಎಂದು ರಂಗಕರ್ಮಿ ಆರುಂಧತಿ ನಾಗ್‌ ಅಭಿಪ್ರಾಯಪಟ್ಟರು.

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಮಂಗಳವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಸಂತೆ ಉದ್ಘಾಟಿಸಿ ಮಾತನಾಡಿದರು.

‘ಪ್ರತಿಯೊಬ್ಬರೂ ಒಂದು ರೀತಿಯಲ್ಲಿ ಮಾನಸಿಕ ಸಮಸ್ಯೆಗೆ ಒಳಗಾಗಿರುತ್ತಾರೆ. ಕೆಲವರು ಹೊರ ಬರುತ್ತಾರೆ. ಮತ್ತೆ ಕೆಲವರು ಸಿಲುಕಿಕೊಂಡು ನರಳುತ್ತಾರೆ. ಸಮಸ್ಯೆ ಉಂಟಾದಾಗ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದರು.

‘ನನ್ನ 34ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡೆ, ದೇಹದ ಹಲವು ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಒಂದು ವರ್ಷ ಗಾಲಿ ಕುರ್ಚಿ ಬಳಸಿದೆ. ಆ ಸಂದರ್ಭದಲ್ಲಿ ಕುಟುಂಬದವರು, ಸ್ನೇಹಿತರು, ಒಡನಾಡಿಗಳು ಹಾಗೂ ವೈದ್ಯರು ನೀಡಿದ ಸಹಕಾರ ಮರೆಯುವಂತಿಲ್ಲ’ ಎಂದು ಹೇಳಿದರು.

ADVERTISEMENT

‘ರಂಗಶಂಕರ ನಿರ್ಮಾಣ ಸಂದರ್ಭದಲ್ಲೇ ಮಗಳು ಹಾಸ್ಟೆಲ್ ಸೇರಬೇಕಾಯಿತು. ಹಲವು ದಿನ ಏಕಾಂಗಿಯಾಗಿದ್ದೆ. ರಂಗಭೂಮಿಯೊಂದಿಗೆ ಐದು ದಶಕದ ನಂಟು. ಅಡುಗೆ ಮಾಡುವುದು, ಹೊಲಿಗೆ ಹಾಕುವುದು, ಕೈ ತೋಟದಲ್ಲಿ ತೊಡಗಿಸಿಕೊಂಡರೆ ಸಮಸ್ಯೆಯಿಂದ ಹೊರ ಬರಬಹುದು. ಆದರೆ, ಜನರು ಒಳ್ಳೆಯ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜೀವನದಲ್ಲಿ ಹಣ ಗಳಿಸಲು ಆರಂಭಿಸುತ್ತಿದ್ದಂತೆ ನಮ್ಮನ್ನೇ ನಾವು ಮರೆಯುತ್ತೇವೆ. ಒಳ್ಳೆಯ ಹವ್ಯಾಸಗಳು ನೆನಪು ಆಗುವುದಿಲ್ಲ. ಹಣ ಸಂಪಾದನೆ ಜೊತೆಗೆ ಉತ್ತಮ ಹವ್ಯಾಸಗಳು ಇರಬೇಕು’ ಎಂದು ಹೇಳಿದರು.

ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ.ಕೆ.ಎಸ್.ಮೀನಾ ಪ್ತಾಸ್ತಾವಿಕವಾಗಿ ಮಾತನಾಡಿದರು.  ನಿಮ್ಹಾನ್ಸ್ ನಿರ್ದೇಶಕಿ ನಿರ್ವೇಶಕಿ ಡಾ. ಪ್ರತಿಮಾ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಆತ್ಮಹತ್ಯೆ ತಡೆ ಕುರಿತು ವಿವಿಧ ಸಂಘ ಸಂಸ್ಥೆಗಳು ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದವು.

ಮಾನಸಿಕ ಸಮಸ್ಯೆ: 14416ಕ್ಕೆ ಕರೆ ಮಾಡಿ

‘ಮಾನಸಿಕ ಕಾಯಿಲೆ ಆತ್ಮಹತ್ಯೆ ಯೋಚನೆ ಕೆಲಸದ ಒತ್ತಡ ಪರೀಕ್ಷೆಯ ಭಯ ಏಕಾಂಗಿತನ ಖಿನ್ನತೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದರೆ ‘ಟೆಲಿ ಮನಸ್’ ಸಹಾಯವಾಣಿ ಸಂಖ್ಯೆ 14416ಕ್ಕೆ ಕರೆ ಮಾಡಿ ಮಾಡಿ ಉಚಿತ ಸಲಹೆ ಪಡೆಯಬಹುದು’ ಎಂದು ನಿಮ್ಹಾನ್ಸ್ ವೈದ್ಯರು ತಿಳಿಸಿದರು.

ಮೂರನೇ ಆವೃತ್ತಿಯ ಮಾನಸಿಕ ಆರೋಗ್ಯ ಸಂತೆಯಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಘ–ಸಂಸ್ಥೆಗಳು ಮಳಿಗೆ ತೆರೆದಿದ್ದವು. ಇದರಲ್ಲಿ ಟೆಲಿ ಮನಸ್ ಸಹ ಒಂದು. ‘ಟೆಲಿ ಮನಸ್‌ಗೆ ಕರೆ ಮಾಡಿದರೆ ಆಪ್ತ ಸಮಾಲೋಚಕರು ಸಮಸ್ಯೆ ಆಲಿಸಿ ಸೂಕ್ತ ಸಲಹೆ ನೀಡುತ್ತಾರೆ. ಅಗತ್ಯವೆನಿಸಿದರೆ ವೈದ್ಯರು ಔಷಧ ಸೂಚಿಸುತ್ತಾರೆ. ಹಲವು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ವೈದ್ಯಾಧಿಕಾರಿ ಡಿ. ಯತೀಶ್‌ ಹೇಳಿದರು. 

‘ಮಾನಸಿಕ ಕಾಯಿಲೆಗೆ ಕೌನ್ಸೆಲಿಂಗ್ ಥೆರಪಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ನಂತರ ಕಂಪ್ಯೂಟರ್ ತರಬೇತಿ ಜೀವನ ಕೌಶಲ ಅಡಿಕೆ ತಟ್ಟೆ ತಯಾರಿಕೆ ತರಬೇತಿ ನೀಡಲಿದ್ದೇವೆ’ ಎಂದು ಕ್ಷೇಮ ಮೈಂಡ್ ಕೇರ್‌ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಶ್ರೀಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.