ADVERTISEMENT

ಆ್ಯಸಿಡ್ ದಾಳಿ ಆರೋಪಿಗಳಿಗೆ ಕಂಡಲ್ಲಿ ಗುಂಡು ಹೊಡೆಯಬೇಕು: ಸಂತ್ರಸ್ತೆ ತಂದೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 7:48 IST
Last Updated 23 ಜುಲೈ 2022, 7:48 IST
ಬೆಂಗಳೂರು ಪೊಲೀಸರ ಮಾಸಿಕ ಜನ ಸಂಪರ್ಕ ಸಭೆ
ಬೆಂಗಳೂರು ಪೊಲೀಸರ ಮಾಸಿಕ ಜನ ಸಂಪರ್ಕ ಸಭೆ   

ಬೆಂಗಳೂರು: 'ಹೆಣ್ಣು ಮಕ್ಕಳ ಮೇಲೆ ನಡೆಯುವ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಂಡಲ್ಲಿ ಗುಂಡು ಹೊಡೆಯಲು ಸರ್ಕಾರ ಹೊಸ ಕಾನೂನು ಜಾರಿಗೊಳಿಸಬೇಕು' ಎಂದು ಸಂತ್ರಸ್ತ ಯುವತಿಯ ತಂದೆ ರಾಜಣ್ಣ ಆಗ್ರಹಿಸಿದ್ದಾರೆ.

ನಗರದ ಬಸವೇಶ್ವರನಗರದಲ್ಲಿ ಶನಿವಾರ ಹಮ್ಮಿಕೊಂಡಿರುವ 'ಬೆಂಗಳೂರು ಪೊಲೀಸರ ಮಾಸಿಕ ಜನ ಸಂಪರ್ಕ ಸಭೆ'ಯಲ್ಲಿ ಅಳಲು ತೋಡಿಕೊಂಡ ರಾಜಣ್ಣ, ತಮ್ಮ ಮಗಳ ಮೇಲಾದ ದಾಳಿಯ ನೋವನ್ನು ಕಮಿಷನರ್ ಪ್ರತಾಪ್ ರೆಡ್ಡಿ ಎದುರು ತೆರೆದಿಟ್ಟರು. ಮಗಳು ಅನುಭವಿಸಿದ ಯಾತನೆ ನೆನೆದು ಭಾವುಕರಾದರು.

'ಮಗಳನ್ನು ಚೆನ್ನಾಗಿ ಬೆಳೆಸಿದ್ದೆ. ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ‌ ಮಗಳ ಮೇಲೆ ಆರೋಪಿ ಆ್ಯಸಿಡ್ ಎರಚಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆ್ಯಸಿಡ್ ದಾಳಿಯಿಂದ ಮಗಳು ತೀವ್ರ ನೊಂದಿದ್ದಾಳೆ. ಆತ್ಮಹತ್ಯೆಗೂ ಯೋಚಿಸಿದ್ದಳು. ನಾವೇ ಧೈರ್ಯ ತುಂಬಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಕೊಡಿಸುತ್ತಿದ್ದೇವೆ' ಎಂದೂ ರಾಜಣ್ಣ ಹೇಳಿದರು.

'ನಮ್ಮ ಮಗಳಿಗಾದ ನೋವು ಯಾರಿಗೂ ಆಗಬಾರದು. ಇಂಥ ಆ್ಯಸಿಡ್ ದಾಳಿ ಪ್ರಕರಣಗಳ ಆರೋಪಿಗಳನ್ನು ಕಂಡಲ್ಲಿ ಗುಂಡು ಹೊಡೆದು ಸಾಯಿಸಬೇಕು. ಇಂಥ ಕಾನೂನು ಜಾರಿ ಬಗ್ಗೆ ಪೊಲೀಸರು, ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಈ ಮೂಲಕ ಆ್ಯಸಿಡ್ ದಾಳಿ ತಡೆಯಬೇಕು' ಎಂದೂ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಪ್ರತಾಪ್ ರೆಡ್ಡಿ, 'ಆ್ಯಸಿಡ್ ದಾಳಿ ಪ್ರಕರಣ ಗಂಭೀರವಾದದ್ದು. ನಾನು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಾಮಾಕ್ಷಿಪಾಳ್ಯ ಠಾಣೆಯ ಆ್ಯಸಿಡ್ ದಾಳಿ ಪ್ರಕರಣದ ಪ್ರಗತಿ ಬಗ್ಗೆ ಸಭೆ ಮಾಡಿದೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ನ್ಯಾಯಾಲಯದಲ್ಲಿ ಸಮರ್ಪಕ ಪ್ರಯತ್ನ ಮಾಡಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT