ಬೆಂಗಳೂರು: ನಗರದೆಲ್ಲೆಡೆ ಮಂಗಳವಾರ ಸಂಭ್ರಮ ಹಾಗೂ ಸಡಗರದಿಂದ ವಿಜಯದಶಮಿ ಹಬ್ಬವನ್ನು ಆಚರಿಸಲಾಯಿತು.
ಜೆ.ಸಿ.ನಗರ ದಸರಾ ಮಹೋತ್ಸವ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ವೈಭವೋಪೇತ ದಸರಾ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮಳೆಯಿಂದಾಗಿ ತಡವಾಗಿ ಮೆರವಣಿಗೆ ಆರಂಭವಾಯಿತು. ದೇವರ ಮೂರ್ತಿಗಳನ್ನು ಕಂಡು ಭಕ್ತರು ಪುಳಕಿತರಾದರು.
ಶಿವಾಜಿನಗರ, ಆರ್.ಟಿ. ನಗರ, ಲಕ್ಷ್ಮೀದೇವಮ್ಮ ಬ್ಲಾಕ್, ಸಿಬಿಐ ರಸ್ತೆ, ಮಠದಹಳ್ಳಿ, ಮೋತಿನಗರ, ಗಂಗೇನಹಳ್ಳಿ, ಸುಲ್ತಾನ್‌ಪಾಳ್ಯ, ಯಶವಂತಪುರ, ಹೆಬ್ಬಾಳ, ಗಂಗಾನಗರಗಳ ದೇವರ ಮೂರ್ತಿಗಳು ಅಲಂಕೃತಗೊಂಡ ರಥಗಳಲ್ಲಿ ಜೆ.ಸಿ. ನಗರದ ದಸರಾ ಮೈದಾನದತ್ತ ಸಾಗಿ ಬಂದವು.
ಮಧ್ಯ ರಾತ್ರಿ ಸುಮಾರಿಗೆ ಮೈದಾನಕ್ಕೆ ವಿವಿಧೆಡೆಯ ರಥಗಳು ಬಂದು ತಲುಪಿದ ನಂತರ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ಅರಮನೆ ರಸ್ತೆಯ ಮಾರ್ಗವಾಗಿ ಸಾಗಿದ ಮೆರವಣಿಗೆ ಮುಂಜಾನೆ ವೇಳೆ ದಸರಾ ಮೈದಾನ ತಲುಪಿತು. ಮೆರವಣಿಗೆ ನೋಡಲು ಜೆ.ಸಿ.ನಗರಮುಖ್ಯರಸ್ತೆ ಹಾಗೂ ಅರಮನೆ ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.
ರಸ್ತೆಗಳ ಇಕ್ಕೆಲಗಳಲ್ಲಿ ಜಾತ್ರೆಯ ವಾತಾವರಣವಿತ್ತು. ಹೂವಿನ ಪಲ್ಲಕ್ಕಿ, ಪೂಜಾ ಕುಣಿತ, ಕೀಲು ಕುದುರೆ, ಕರಡಿ ಮೇಳ, ಗೊರವರ ಕುಣಿತ, ಪಟ ಕುಣಿತ, ಡೊಳ್ಳು ಕುಣಿತ ಸೇರಿದಂತೆ ಹಲವು ಜನಪದ ಕಲಾತಂಡಗಳು ಪ್ರದರ್ಶನ ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಪಂಜಿನ ಕವಾಯತುಗಳು, ನಾನಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ವಿದ್ಯಾಗಣಪತಿ ದೇವಸ್ಥಾನದ ಬಳಿ ಪಟಾಕಿಗಳನ್ನು ಸಿಡಿಸಲಾಯಿತು.
ವಿಜಯದಶಮಿ ಪ್ರಯುಕ್ತ ಮಂಗಳವಾರ ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜನರು ಬನ್ನಿ ಎಲೆಗಳನ್ನು ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ದೇವಸ್ಥಾನಗಳಲ್ಲಿ ನಡೆದ ಪಲ್ಲಕ್ಕಿ ಉತ್ಸವಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು.
ಯಶವಂತಪುರ ವೃತ್ತ ಬಳಿಯ ಗಾಯತ್ರಿ ದೇವಸ್ಥಾನ, ಚಿನ್ನಯ್ಯನಪಾಳ್ಯದ ಮಾರಮ್ಮ ಆಂಜನೇಯಸ್ವಾಮಿ ದೇವಾಲಯ, ಜೆ.ಪಿ ನಗರದ ಬ್ರಹ್ಮ–ವಿಷ್ಣು– ಮಹೇಶ್ವರ ದೇವಸ್ಥಾನ, ಎಚ್‌ಎಂಟಿ ಬಡಾವಣೆಯಚೌಡೇಶ್ವರಿ ದೇವಾಲಯ, ಶಂಕರಪುರದ ಮಹೇಶ್ವರಮ್ಮ ದೇವಿ ದೇವಾಲಯ, ಕೃಷ್ಣರಾಜಪುರದ ದುರ್ಗಾ ಮಹೇಶ್ವರಮ್ಮ ದೇವಾಲಯ, ಶಂಕರಪುರದ ಶೃಂಗೇರಿ ಶಂಕರ ಮಠ, ಜೆ.ಪಿ ನಗರದ ವಿಜಯಗಣಪತಿ ಮತ್ತು ಶಾರದಾ ಚಂದ್ರಮೌಳೀಶ್ವರ ದೇವಸ್ಥಾನ, ಕೋಣನಕುಂಟೆಯ ಮಾತಾ ಅನ್ನಪೂರ್ಣೇಶ್ವರಿ ದೇವಾಲಯ, ನಂದಿನಿ ಬಡಾವಣೆಯ ದುರ್ಗಾಪರಮೆಶ್ವರಿ ದೇವಾಲಯ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆಗಳುನಡೆದವು.
ಸಿಬ್ಬಂದಿ ಹಣದಲ್ಲೇ ಬಸ್‌ಗೆ ಪೂಜೆ
ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಆಯುಧ ಪೂಜೆ ಆಚರಣೆಗೆ ಬಸ್‌ಗಳ ಪೂಜೆಗಾಗಿ ತಲಾ ₹ 100 ನೀಡಿತ್ತು. ಇದು ಯಾವುದಕ್ಕೂ ಸಾಲದ ಕಾರಣ ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿ ಬಸ್‌ಗಳಿಗೆ ಪೂಜೆ ಮಾಡಿದರು. ಬಸ್‌ಗಳನ್ನು ಶುಚಿಗೊಳಿಸಿ, ಹೂವುಗಳಿಂದ ಅಲಂಕರಿಸಿ ಸಂಭ್ರಮಿಸಿದರು.
ಖಾಕಿ ಸಮವಸ್ತ್ರದ ಬದಲು ಸಾಂಪ್ರದಾಯಿಕ ಉಡುಗೆ: ನಗರ ಪೊಲೀಸ್ ಕಮಿಷನರ್ ಕಚೇರಿ, ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಎಲ್ಲ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಖಾಕಿ ದಿರಿಸು ಬದಲಾಗಿಪೊಲೀಸರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಆಯುಧ ಪೂಜೆ ಪ್ರಯುಕ್ತ, ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಪೊಲೀಸ್ ಠಾಣೆ ಸೇರಿ 145 ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಬಳಸುವ ವಾಹನಗಳು, ರಿವಾಲ್ವರ್, ರೈಫಲ್ ಹಾಗೂ ಇತರೆ ವಸ್ತುಗಳನ್ನು ಹೊಂದಿಸಿಟ್ಟು ಪೂಜೆ ಸಲ್ಲಿಸಲಾಯಿತು.
ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು (ಸಿಎಆರ್) ಪಡೆ ಆವರಣದಲ್ಲಿ ಆಯೋಜಿಸಿದ್ದ ಪೂಜೆಯಲ್ಲಿ ಬಾಳೆ ಕಂಬ(ಬನ್ನಿ ಮುಡಿಸಿ) ಕತ್ತರಿಸಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್, ಸಹೋದ್ಯೋಗಿಗಳಿಗೆ ಹಬ್ಬದ ಶುಭ ಕೋರಿದರು.
ಪೊಲೀಸ್ ಕಮಿಷನರ್ ಕಚೇರಿ, ಸಿಸಿಬಿ ಕಚೇರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಪೂರ್ವ ಮತ್ತು ಪಶ್ಚಿಮ ವಲಯಗಳ ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳಾದ ಎಸ್.ಮುರುಗನ್, ಉಮೇಶ್ ಕುಮಾರ್ ಹಾಗೂ ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ಹಾಗೂ ಎಲ್ಲ ವಿಭಾಗದ ಡಿಸಿಪಿಗಳು ಹಾಜರಿದ್ದರು. ಪೊಲೀಸ್ ಇಲಾಖೆಯಲ್ಲಿ ಬಳಸಲಾಗಿದ್ದ ಹಳೆಯ ಪೊಲೀಸ್ ರೈಫಲ್ಸ್ ಸೇರಿದಂತೆ ಲಘು ಮೆಷಿನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್, ಎ.ಕೆ–47, ಡಿ-ಸ್ಯಾಟ್ ವಾಹನಗಳು ಸೇರಿದಂತೆ ಆಧುನಿಕ ಮಾದರಿಯ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು.
ವಾಹನ ಪೂಜೆಗೆ ಸರತಿ ಸಾಲು
ಆಯುಧ ಪೂಜೆಯ ದಿನ ವಾಹನಗಳಿಗೆ ಬಾಳೆ ಕಂದು ಕಟ್ಟಿ, ಹೂವಿನ ಮಾಲೆ ಹಾಕಿ ಅಲಂಕರಿಸಿ ಪೂಜೆ ಸಲ್ಲಿಸಿದರು.
ದೇವಾಲಯಗಳಲ್ಲಿ ವಾಹನಗಳ ಪೂಜೆಗಾಗಿ ವಿಶೇಷ ಏರ್ಪಾಡು ಮಾಡಲಾಗಿತ್ತು. ಸರತಿ ಸಾಲಿನಲ್ಲಿ
ನಿಂತು ವಾಹನಗಳಿಗೆ ಪೂಜೆ ಮಾಡಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಆಯುಧಪೂಜೆ ದಿನ ವಾಹನಕ್ಕೆ ಪೂಜೆ ಮಾಡಿಸಲು ಸಾಧ್ಯವಾಗದವರು ಮಂಗಳವಾರ ಪೂಜೆ ಮಾಡಿಸಿಕೊಂಡರು. ಯಂತ್ರೋ ಪಕರಣಗಳಿಗೂ ಪೂಜೆ ಮಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಾಲರ್ಸ್ ಕಾಲೊನಿಯ ತಮ್ಮ ಮನೆಯಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.