ಬೆಂಗಳೂರು: ನಗರದಲ್ಲಿ ಸೋಮವಾರ ನಸುಕಿನಲ್ಲಿ ಮಸೀದಿಗಳ ಆಜಾನ್‌ಗೆ ಸಮವಾಗಿ ಸುಪ್ರಭಾತ ಮೊಳಗಿಸಲು ಮುಂದಾಗಿದ್ದ ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಹೊತ್ತಿನ ನಂತರ ಬಿಟ್ಟು ಕಳುಹಿಸಿದ್ದಾರೆ.
'ಧಾರ್ಮಿಕ ಸ್ವಾತಂತ್ರ್ಯ ಬಳಸಿಕೊಂಡು ಆಜಾನ್‌ಗೆ ಸಮವಾಗಿ ಸೋಮವಾರ ನಸುಕಿನಲ್ಲಿ ಸುಪ್ರಭಾತ್, ಶ್ರೀರಾಮ ಜಪ ಹಾಗೂ ಹನುಮಾನ್ ಚಾಲೀಸ್ ಮೊಳಗಿಸಿ’ ಎಂದು ಶ್ರೀರಾಮಸೇನೆ ಕರೆ ನೀಡಿತ್ತು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ನೀಲಸಂದ್ರದಲ್ಲಿ ಸೇರಿದ್ದ ಶ್ರೀರಾಮಸೇನೆ ಕಾರ್ಯಕರ್ತರು, ಸುಪ್ರಭಾತ ಹಾಗೂ ಶ್ರೀರಾಮ ಜಪ ಮೊಳಗಿಸಲು ಮುಂದಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು, ‘ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ದಯವಿಟ್ಟು ಹೊರಟು ಹೋಗಿ’ ಎಂದು ಕೋರಿದರು.
ಅದಕ್ಕೆ ಒಪ್ಪದ ಕಾರ್ಯಕರ್ತರು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಧ್ವನಿವರ್ಧಕ ಬಳಸಲು ಯತ್ನಿಸಿದ್ದರು. ಅದೇ ಸಂದರ್ಭದಲ್ಲೇ ಪೊಲೀಸರು, ಕೆಲ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ತಳ್ಳಾಟ– ನೂಕಾಟವೂ ನಡೆಯಿತು.
ಸುದ್ದಿಗಾರರ ಜೊತೆ ಮಾತನಾಡಿದ ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ, ‘ಪೊಲೀಸರನ್ನು ಬಳಸಿಕೊಂಡು ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.
ವಿವೇಕನಗರ ಬಳಿಯ ಆಂಜನೇಯ ದೇವಸ್ಥಾನದಲ್ಲೂ ಕಾರ್ಯಕರ್ತರು ಸೇರಿದ್ದರು. ಭದ್ರತೆ ಕೈಗೊಂಡಿದ್ದ ಪೊಲೀಸರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.