ADVERTISEMENT

ಬಿ–ಖಾತಾ ಆಸ್ತಿಗಳಿಗೆ ಎ–ಖಾತಾ: ಮಾನದಂಡ ರೂಪಿಸಿ

ಕಂದಾಯ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಮೇಯರ್‌ ಗಂಗಾಂಬಿಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:57 IST
Last Updated 4 ಜೂನ್ 2019, 19:57 IST

ಬೆಂಗಳೂರು: ನಗರದಲ್ಲಿ ಆಸ್ತಿಗಳಿಗೆ ಬಿ– ಖಾತಾ ಹೊಂದಿರುವವರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಬಿ–ಖಾತಾವನ್ನು ಎ–ಖಾತಾವನ್ನಾಗಿ ಪರಿವರ್ತಿಸಲು ಅಗತ್ಯ ಮಾನದಂಡಗಳನ್ನು ಶೀಘ್ರವೇ ರೂಪಿಸಬೇಕು ಎಂದು ಮೇಯರ್‌ ಗಂಗಾಂಬಿಕೆ ಸೂಚಿಸಿದರು.

‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ ಸರಣಿಯಲ್ಲಿ‘ಬಿ–ಖಾತಾ’ ಹೊಂದಿರುವವರ ಸಮಸ್ಯೆಯ ಬಗ್ಗೆ ಸೋಮವಾರದ ಸಂಚಿಕೆಯಲ್ಲಿ ಗಮನ ಸೆಳೆಯಲಾಗಿತ್ತು. ಇದರ ಬೆನ್ನಲ್ಲೇ ಕಂದಾಯ ವಿಭಾಗದ ಅಧಿಕಾರಿಗಳ ಸಭೆ ಕರೆದ ಮೇಯರ್‌, ಬಿ–ಖಾತಾ ಬದಲು ಎ–ಖಾತಾ ನೀಡುವ ಬಗ್ಗೆ ಮಂಗಳವಾರ ವಿಸ್ತೃತವಾಗಿ ಚರ್ಚಿಸಿದರು.

‘ಬಿ–ಖಾತಾ ಹೊಂದಿರುವವರು ಎ–ಖಾತಾ ಹೊಂದಿರುವವರಷ್ಟೇ ತೆರಿಗೆ ಪಾವತಿಸುತ್ತಾರೆ. ಆದರೂ ಅನೇಕ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಎ–ಖಾತಾ ಇಲ್ಲ ಎಂಬ ಒಂದೇ ಕಾರಣಕ್ಕೆ ಎಷ್ಟೋ ಮಂದಿಗೆ ತಮ್ಮ ಸ್ವತ್ತುಗಳ ಮೇಲೆ ಸಾಲ ಪಡೆಯಲು ಅಥವಾ ಸ್ವತ್ತುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ಮಂದಿ ಅಳಲು ತೋಡಿಕೊಂಡಿದ್ದಾರೆ’ ಎಂದು ಮೇಯರ್ ತಿಳಿಸಿದರು.

ADVERTISEMENT

‘ಸದ್ಯಕ್ಕೆ ಬಿ–ಖಾತಾವನ್ನು ಎ– ಖಾತಾವನ್ನಾಗಿ ಪರಿವರ್ತಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ಎ– ಖಾತಾ ನೀಡುವ ಬಗ್ಗೆ ನಿಯಮ ರೂಪಿಸುವ ಅಗತ್ಯ ಇದೆ. ಈ ಬಗ್ಗೆ ಸೂಕ್ತ ಮಾನದಂಡಗಳನ್ನು ರೂಪಿಸುವಂತೆ ನಗರಾಭಿವೃದ್ಧಿ ಇಲಾಖೆಯೂ ಪಾಲಿಕೆಗೆ ಸೂಚಿಸಿದೆ. ಆದಷ್ಟು ಬೇಗ ನಾವು ಈ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ’ ಎಂದರು.

ಅಕ್ರಮ ಸಹಿಸಲಾಗದು: ‘ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಮಹದೇವಪುರ ವಲಯಗಳಲ್ಲಿ ಬಿ–ಖಾತಾ ಹೊಂದಿರುವವರಿಗೆ ಅಕ್ರಮವಾಗಿ ಎ–ಖಾತಾ ಮಾಡಿಕೊಟ್ಟಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಮಹಿಳೆಯೊಬ್ಬರು ಎ– ಖಾತಾ ಇರುವ ಆಸ್ತಿ ಹೊಂದಿದ್ದು, ಕಂದಾಯ ಅಧಿಕಾರಿಯೊಬ್ಬರು ಅದೇ ಆಸ್ತಿಗೆ ಇನ್ನೊಬ್ಬರಿಗೆ ಬಿ–ಖಾತಾ ಮಾಡಿಸಿಕೊಟ್ಟಿದ್ದಾರೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುತ್ತೀರಾ. ಇಂತಹ ಅಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಮೇಯರ್‌ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಈ ಮೂರು ವಲಯಗಳಲ್ಲಿ ಅಕ್ರಮವಾಗಿ ಎ–ಖಾತಾ ಮಾಡಿಸಿಕೊಟ್ಟಿರುವ ಎಲ್ಲ ವಿವರಗಳನ್ನು ವಿಶೇಷ ಆಯಕ್ತರು (ಕಂದಾಯ) ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದು ಮೇಯರ್‌ ಸೂಚಿಸಿದರು.

‘ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ಬಿ– ಖಾತಾವನ್ನು ಎ– ಖಾತಾ ವನ್ನಾಗಿ ಪರಿವರ್ತಿಸುವ ಮೂಲಕ ಸುಮಾರು ₹ 3 ಸಾವಿರ ಕೋಟಿ ಆದಾಯ ಗಳಿಸುವ ಗುರಿಯನ್ನು ಪಾಲಿಕೆ ಹೊಂದಿದೆ. ಇದರಿಂದ ಬಡವರ ಮತ್ತು ಮಧ್ಯಮ ವರ್ಗದವರ ಆತಂಕಗಳು ದೂರ
ವಾಗಲಿವೆ. ಇದು ಅಕ್ರಮ– ಸಕ್ರಮವಲ್ಲ. ಪಾಲಿಕೆಗೆ ಹಾಗೂ ಜನರಿಗೆ ಇದರಿಂದ ಅನುಕೂಲವಾಗಲಿದೆ’ ಎಂದರು.

ತೆರಿಗೆ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹಾಗೂ ವಿಶೇಷ ಆಯುಕ್ತ (ಹಣಕಾಸು) ಲೋಕೇಶ್‌ ಉಪಸ್ಥಿತರಿದ್ದರು.

‘ಬಾಕಿ ತೆರಿಗೆ ವಸೂಲಿ: ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’

ಅನೇಕ ವರ್ಷಗಳಿಂದ ತೆರಿಗೆ ಕಟ್ಟದಿರುವ ಸಂಸ್ಥೆಗಳಿಂದ ನಿರ್ದಾಕ್ಷಿಣ್ಯವಾಗಿ ತೆರಿಗೆ ವಸೂಲಿ ಮಾಡುವಂತೆ ಮೇಯರ್‌ ನಿರ್ದೇಶನ ನೀಡಿದರು.

‘ತೆರಿಗೆ ಬಾಕಿ ಉಳಿಸಿಕೊಂಡ ಅಗ್ರ 100 ಸಂಸ್ಥೆಗಳಿಗೆ ಮೊದಲು ನೋಟಿಸ್‌ ನೀಡಬೇಕು. ಬಳಿಕವೂ ತೆರಿಗೆ ಕಟ್ಟದಿದ್ದರೆ ಜಪ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದರು. ‘ಚುನಾವಣಾ ಕರ್ತವ್ಯ ಎಂದು ಹೇಳಿಕೊಂಡು ಎರಡು ತಿಂಗಳು ಕಳೆದಿದ್ದೀರಿ. ಇನ್ನಾದರೂ ಚುರುಕಿನಿಂದ ಕೆಲಸ ಮಾಡಬೇಕು. ಟೋಟಲ್‌ ಸ್ಟೇಷನ್‌ ಸರ್ವೆ ಚುರುಕುಗೊಳಿಸಬೇಕು. ಪ್ರತಿ ಬುಧವಾರ ತೆರಿಗೆ ವಸೂಲಾತಿ ಆಂದೋಲನ ನಡೆಸಬೇಕು’ ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.