ADVERTISEMENT

‘ಪ್ರತ್ಯೇಕ ಪಥ ಸಫಲ, ವೈಫಲ್ಯದ ಪ್ರಶ್ನೆ ಅಲ್ಲ’

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾರೊಂದಿಗೆ ‘ಬೆಂಗಳೂರಿಗಾಗಿ ಸುಸ್ಥಿರ ಸಾರಿಗೆ’ ಸಂವಾದ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 20:14 IST
Last Updated 16 ಅಕ್ಟೋಬರ್ 2019, 20:14 IST
ಸಂವಾದದಲ್ಲಿ ಸಿ. ಶಿಖಾ ಮಾತನಾಡಿದರು. ಎಸಿಪಿ(ಸಂಚಾರ ಮತ್ತು ಯೋಜನೆ) ಎಂ.ಸಿ.ಕವಿತಾ, ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಮಲ್ಲಿಕಾರ್ಜುನ, ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕಟಾರಿಯಾ ಇದ್ದರು –ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಸಿ. ಶಿಖಾ ಮಾತನಾಡಿದರು. ಎಸಿಪಿ(ಸಂಚಾರ ಮತ್ತು ಯೋಜನೆ) ಎಂ.ಸಿ.ಕವಿತಾ, ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಮಲ್ಲಿಕಾರ್ಜುನ, ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕಟಾರಿಯಾ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೆ.ಆರ್.ಪುರ ಟಿನ್‌ ಫ್ಯಾಕ್ಟರಿ ಬಳಿಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ಕಾಯ್ದಿರಿಸುವ ಯೋಜನೆಯಲ್ಲಿ ಸಫಲ ಅಥವಾ ವೈಫಲ್ಯದ ಪ್ರಶ್ನೆ ಉದ್ಬವಿಸುವುದಿಲ್ಲ. ಅದೊಂದು ಉತ್ತಮ ಪ್ರಯೋಗ ಎಂದೇ ಪರಿಗಣಿಸುವುದು ಸೂಕ್ತ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಪ್ರತಿಪಾದಿಸಿದರು.

ನಗರದಲ್ಲಿ ಬಿ–ಪ್ಯಾಕ್ ಸಂಸ್ಥೆಯು ಉಬರ್ ಸಹಯೋಗದಲ್ಲಿ ಆಯೋಜಿಸಿದ್ದ ‘ಬೆಂಗಳೂರಿಗಾಗಿ ಸುಸ್ಥಿರ ಸಾರಿಗೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ‘ಯೋಜನೆ ಸಫಲವಾಗುವುದೇ ಎಂಬ ಅನುಮಾನ ಕೆಲವರಿಗೆ ಇದೆ. ಸಾರ್ವಜನಿಕ ಸಾರಿಗೆ ಉತ್ತೇಜಿಸುವ ಪ್ರಯತ್ನ ಇದಾಗಿದ್ದು, ಒಂದೆರಡು ಕಿಲೋ ಮೀಟರ್‌ನಲ್ಲಿ ಅನುಷ್ಠಾನಗೊಂಡರೂ ಸಫಲತೆಯೇ ಆಗುತ್ತದೆ. ಅಷ್ಟಕ್ಕೂ ಇದು ಆರಂಭಿಕ ಹೆಜ್ಜೆಯಾಗಿದ್ದು, ಅಂತ್ಯವಲ್ಲ’ ಎಂದರು.

‘ಪ್ರತ್ಯೇಕ ಪಥ ಯೋಜನೆ ಏಕಾಏಕಿ ಕೈಗೆತ್ತಿಕೊಂಡ ಯೋಜನೆ ಅಲ್ಲ. ಅದಕ್ಕೆ ಬೇಕಿರುವ ಸಿದ್ಧತೆಗಳು ಹಂತ–ಹಂತವಾಗಿ ನಡೆದಿವೆ. ಸಾಕಷ್ಟು ಸಭೆಗಳು ಹಾಗೂ ಚರ್ಚೆಗಳು ನಡೆದಿವೆ. ಚಾಲಕರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಆ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಹೀಗಾಗಿ, ಇದು ತರಾತುರಿಯಲ್ಲಿ ಅನುಷ್ಠಾನ ಮಾಡುತ್ತಿರುವ ಯೋಜನೆ ಅಲ್ಲ’ ಎಂದು ಸಂವಾದದಲ್ಲಿ ಎದುರಾದ ಪ್ರಶ್ನೆಗಳಿಗೆ ಅವರು ಸ್ಪಷ್ಟನೆ ನೀಡಿದರು.

ADVERTISEMENT

‘ಬಿಎಂಟಿಸಿ ಬಸ್‌ಗಳಿಗೆ ಮಾತ್ರ ಪ್ರತ್ಯೇಕ ಪಥ ನಿರ್ಮಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. 10 ಆಸನಗಳಿಗಿಂತ ಮೇಲ್ಪಟ್ಟ ಖಾಸಗಿ ಬಸ್‌ಗಳ ಸಂಚಾರಕ್ಕೂ ಅವಕಾಶ ಕಲ್ಪಿಸುವುದು ಸೂಕ್ತ’ ಎಂದು ಹೊರವರ್ತುಲ ರಸ್ತೆ ಕಂಪನಿಗಳ ಸಂಘದ ನವೀನ್ ಮಾನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಖಾ, ‘ಈ ಪಥದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಸದ್ಯಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಶಾಲಾ ವಾಹನಗಳಿಗೆ ಅವಕಾಶ ನೀಡುವ ಸಾಧ್ಯತೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ಪ್ರತಿ 30 ಸೆಕೆಂಡ್‌ಗೆ ಬಸ್‌!

ಕೆ.ಆರ್. ಪುರ ಟಿನ್‌ ಫ್ಯಾಕ್ಟರಿ ಬಳಿಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಮಾರ್ಗದಲ್ಲಿ ಸದ್ಯ ಪ್ರತಿ 30 ಸೆಕೆಂಡ್‌ಗೆ ಒಂದು ಬಸ್ ಸಂಚರಿಸುತ್ತಿದೆ ಎಂದು ಶಿಖಾ ಹೇಳಿದರು.

‘ಸದ್ಯ ಈ ಮಾರ್ಗದಲ್ಲಿ 710 ಬಸ್‍ಗಳಿದ್ದು, ಈ ಪೈಕಿ 130 ಬಸ್‍ಗಳು ಬೆಳಿಗ್ಗೆ 9ರಿಂದ 11ರ ಅವಧಿಯಲ್ಲೇ ಸಂಚರಿಸುತ್ತವೆ. ಪ್ರತಿನಿತ್ಯ 30 ಸಾವಿರ ಜನ ಈ ಮಾರ್ಗದಲ್ಲಿ ಬಸ್‌ನಲ್ಲೇ ಸಂಚರಿಸುತ್ತಿದ್ದಾರೆ. ಸಂಚಾರ ದಟ್ಟಣೆ ಕಾರಣದಿಂದ ನಿಗದಿತ ಸ್ಥಳವನ್ನು ಸಕಾಲದಲ್ಲಿ ತಲುಪಲು ಆಗುತ್ತಿಲ್ಲ. ಹೆಚ್ಚುವರಿ ಬಸ್‌ಗಳ ಅಗತ್ಯ ಇಲ್ಲ’ ಎಂದರು.

ಬಸ್ ಇಷ್ಟ, ಮನೆ ತಲುಪುವುದು ಕಷ್ಟ

‘ಬಸ್‌ ಮತ್ತು ಮೆಟ್ರೊ ರೈಲಿನಲ್ಲಿ ಸಂಚರಿಸುವುದು ಜನರಿಗೆ ಇಷ್ಟ. ಆದರೆ, ಸಮೂಹ ಸಾರಿಗೆ ನಂಬಿಕೊಂಡು ಮನೆ ತಲುಪುವುದು ಕಷ್ಟ..!’

ಸಂವಾದದಲ್ಲಿ ಭಾಗವಹಿಸಿದ್ದ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ವ್ಯಕ್ತಪಡಿಸಿದ ಅಭಿಪ್ರಾಯವಿದು.

‘ವಾಹನದಟ್ಟಣೆ ನಡುವೆ ಗಂಟೆಗಟ್ಟಲೆ ವಾಹನ ಚಾಲನೆ ಮಾಡುವುದು ಯಾರಿಗೂ ಇಷ್ಟ ಇಲ್ಲ. ವೋಲ್ವೊ ಬಸ್ ಅಥವಾ ಮೆಟ್ರೊ ರೀತಿಯ ಹವಾನಿಯಂತ್ರಿತ ಸಮೂಹ ಸಾರಿಗೆಗಳಲ್ಲಿ ಸಂಚರಿಸಲು ಜನ ಇಷ್ಟಪಡುತ್ತಾರೆ. ಆದರೆ, ಕೊನೆ ತಾಣದವರೆಗೆ ಸಂಪರ್ಕ ಕಲ್ಪಿಸದ ಕಾರಣ ಸಮೂಹ ಸಾರಿಗೆ ಬಳಕೆಗೆ ಪ್ರಯಾಣಿಕರು ಹಿಂದೇಟು ಹಾಕುತ್ತಾರೆ’ ಎಂದು ಸಭೆಯಲ್ಲಿದ್ದ ಬಹುತೇಕರು ಹೇಳಿದರು.

ಬಿ–ಪ್ಯಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್ ಮಾತನಾಡಿ, ‘ಎಲ್ಲ ಸಮೂಹ ಸಾರಿಗೆ ವ್ಯವಸ್ಥೆಗೆ ಒಂದೇ ಮಾದರಿಯ ಕಾರ್ಡ್ ಪರಿಚಯಿಸಬೇಕು ಮತ್ತು ಇವುಗಳ ಕಾರ್ಯಕ್ಷಮತೆ ಹೆಚ್ಚಿಸಬೇಕು. ಜತೆಗೆ ಕೊನೆಯ ತಾಣಕ್ಕೆ ಸಂಪರ್ಕ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.