ADVERTISEMENT

ಪ್ರೀತಂ ಗೌಡ ಮನವೊಲಿಕೆಗೆ ವಿಜಯೇಂದ್ರ ಯತ್ನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 6:08 IST
Last Updated 2 ಏಪ್ರಿಲ್ 2024, 6:08 IST
ಪ್ರೀತಂ ಜೆ ಗೌಡ
ಪ್ರೀತಂ ಜೆ ಗೌಡ   

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮತ್ತು ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಮುಖಾಮುಖಿಯಾಗಿಸುವ ಮೂಲಕ ಇಬ್ಬರ ಮಧ್ಯೆ ಸಂಧಾನ ನಡೆಸುವ ಪ್ರಯತ್ನವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ನಡೆಸಿದರು.

ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ರಾತ್ರಿ ನಡೆದ ಸಭೆಯಲ್ಲಿ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಕೂಡ ಇದ್ದರು. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್‌ ಸ್ಪರ್ಧಿಸುವುದನ್ನು ವಿರೋಧಿಸಿದ್ದ ಪ್ರೀತಂ ಗೌಡ, ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ವೈಮನಸ್ಸು ಮರೆತು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗುವಂತೆ ಪ್ರೀತಂ ಅವರನ್ನು ಮನವೊಲಿಸಲು ವಿಜಯೇಂದ್ರ ಪ್ರಯತ್ನಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರಜ್ವಲ್‌, ‘ವಿಜಯೇಂದ್ರ ಅವರ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಬಿಜೆಪಿ ಮುಖಂಡರ ಸಭೆ ನಡೆಯಿತು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಸಭೆಯಲ್ಲಿ ನಡೆದಿದೆ. ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ವಿಜಯೇಂದ್ರ ಸೂಚಿಸಿದ್ದಾರೆ’ ಎಂದರು.

ADVERTISEMENT

‘ಗುರುವಾರ ನಾಮಪತ್ರ ಸಲ್ಲಿಸುತ್ತೇನೆ. ಆ ಸಂದರ್ಭದಲ್ಲಿ ಎಲ್ಲರೂ ಹಾಜರಿರುತ್ತಾರೆ’ ಎಂದು ಹೇಳಿದರು.

‘ಪ್ರೀತಂ ಗೌಡ ನಿಮ್ಮೊಂದಿಗೆ ಪ್ರಚಾರಕ್ಕೆ ಬರುತ್ತಾರಾ’ ಎಂಬ ಪ್ರಶ್ನೆಗೆ, ‘ಬರಲೇಬೇಕಲ್ಲವೆ? ಇದು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಡೆಯುವ ಪ್ರಯತ್ನ. ಎಲ್ಲರೂ ಒಟ್ಟಿಗೆ ಹೋಗಲೇಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.