ADVERTISEMENT

ಬಾಬು ಜಗಜೀವನ್‌ ರಾಂ ಜನ್ಮದಿನಾಚರಣೆಯಲ್ಲಿ ಗೊಂದಲ ಸೃಷ್ಟಿ

ಆದಿ ಜಾಂಬವ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 20:01 IST
Last Updated 5 ಏಪ್ರಿಲ್ 2022, 20:01 IST
ಘೋಷಣೆ ಕೂಗಿದ ಆದಿಜಾಂಬವ ಸಂಘಟನೆಯ ಮುಖಂಡರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದರು.
ಘೋಷಣೆ ಕೂಗಿದ ಆದಿಜಾಂಬವ ಸಂಘಟನೆಯ ಮುಖಂಡರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದರು.   

ಬೆಂಗಳೂರು: ಮಾಜಿ ಉಪಪ್ರಧಾನಿ ಬಾಬು ಜಗಜೀವನ್‌ ರಾಂ ಅವರ ಘನತೆಗೆ ತಕ್ಕಂತೆ ಜನ್ಮದಿನಾಚರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿಲ್ಲ ಎಂದು ಆರೋಪಿಸಿ ಆದಿಜಾಂಬವ ಸಂಘಟನೆಯ ಮುಖಂಡರು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು.

‘ಜಗಜೀವನ್‌ ರಾಂ ಅವರು ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಹಸಿರು ಕ್ರಾಂತಿಗೆ ಕಾರಣರೂ ಆಗಿದ್ದಾರೆ. ಆದರೆ, ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಜನ ಬಂದಿಲ್ಲ. ಕಾರ್ಯಕ್ರಮವನ್ನು ಸಮರ್ಪಕವಾಗಿ ಸಂಘಟಿಸದೇ ಇರುವುದೇ ಕಾರಣ’ ಎಂದು ಮುಖಂಡರು ದೂರಿದರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಮುಖಂಡರನ್ನು ಸಮಾಧಾನಪಡಿಸಿದರು.

‘ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ. ಸರ್ಕಾರದ ಯಾವುದೇ ಯೋಜನೆಗಳೂ ಮಾದಿಗ ಸಮುದಾಯಕ್ಕೆ ತಲುಪುತ್ತಿಲ್ಲ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಷಣ ಮಾಡುವಾಗ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ‘ನಿಮ್ಮ ಅಹವಾಲು ಸ್ವೀಕರಿಸಿ, ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು’ ಎಂದು ಬೊಮ್ಮಾಯಿ ಭರವಸೆ ನೀಡಿದರು.

ADVERTISEMENT

ಮಾದಿಗ ಸಮುದಾಯಕ್ಕೆ ಶೇ 6 ಮೀಸಲು, ದಲಿತ ಮುಖಂಡರ ಮೇಲಿನ ಮೊಕದ್ದಮೆ ವಾಪಸ್‌ ಪಡೆಯುವುದು, ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ₹1000 ಕೋಟಿ ಅನುದಾನ ನೀಡುವಂತೆ ಮುಖಂಡರು ಬೇಡಿಕೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.