ADVERTISEMENT

ಬಾಬು ಸಾ ಪಾಳ್ಯ ಕಟ್ಟಡ ಕುಸಿತ ಪ್ರಕರಣ: ಇನ್ನೂ ಸಿಗದ ಉಪ ಗುತ್ತಿಗೆದಾರನ ಸುಳಿವು

ಬಾಬು ಸಾ ಪಾಳ್ಯದಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:20 IST
Last Updated 24 ಅಕ್ಟೋಬರ್ 2024, 15:20 IST
ಬೆಂಗಳೂರಿನ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಗುರುವಾರ ಕಾರ್ಯಾಚರಣೆ ನಡೆಸಿದರು
ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್ 
ಬೆಂಗಳೂರಿನ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಗುರುವಾರ ಕಾರ್ಯಾಚರಣೆ ನಡೆಸಿದರು ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್    

ಬೆಂಗಳೂರು: ಇಲ್ಲಿನ ಬಾಬು ಸಾ ಪಾಳ್ಯದ ಕಟ್ಟಡ ಕುಸಿದ ಸ್ಥಳದಲ್ಲಿ ಗುರುವಾರ ದಿನವಿಡೀ ಅವಶೇಷಗಳನ್ನು ತೆರವುಗೊಳಿಸಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದರೂ ನಾಪತ್ತೆಯಾಗಿರುವ ಉಪ ಗುತ್ತಿಗೆದಾರ ಏಳುಮಲೈ ಅವರ ಸುಳಿವು ಲಭಿಸಲಿಲ್ಲ.

ಗುರುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಶುಕ್ರವಾರ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಲಿದ್ದಾರೆ.

ಕಟ್ಟಡ ಕುಸಿತ ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಅವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಏಳುಮಲೈ ಹಾಗೂ ಗಜೇಂದ್ರ ಎಂಬುವರು ನಾಪತ್ತೆ ಆಗಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಮೂರು ದಿನಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.

ADVERTISEMENT

‘ರಕ್ಷಣೆಯಾದ ಎಲ್ಲ ಸಹ ಕಾರ್ಮಿಕರನ್ನೂ ವಿಚಾರಣೆ ನಡೆಸಲಾಗಿದ್ದು, ಗಜೇಂದ್ರ ಹೆಸರಿನ ಕಾರ್ಮಿಕ ಕಟ್ಟಡದಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಸದ್ಯಕ್ಕೆ ಏಳುಮಲೈ ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಏಳುಮಲೈ ಅವರು ಬಳಸುತ್ತಿದ್ದ ಮೊಬೈಲ್‌ ರಿಂಗ್ ಆಗುತ್ತಿದೆ. ಲೊಕೇಷನ್‌ ಸಹ ಇದೇ ವ್ಯಾಪ್ತಿಯಲ್ಲಿ ಇದೆ’ ಎಂದು ಮೂಲಗಳು ತಿಳಿಸಿವೆ.

ವ್ಯಕ್ತಿ ಓಡಿ ಹೋಗುತ್ತಿರುವ ದೃಶ್ಯ ಸೆರೆ: ಕಟ್ಟಡ ಕುಸಿಯುವ ಸಂದರ್ಭದಲ್ಲಿ ಉಂಟಾದ ಜೋರು ಶಬ್ದದಿಂದ ಎಚ್ಚೆತ್ತು ವ್ಯಕ್ತಿಯೊಬ್ಬ ಓಡಿ ಹೋಗುತ್ತಿರುವ ದೃಶ್ಯ ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೆರೆಯಾದ ದೃಶ್ಯದಲ್ಲಿರುವ ವ್ಯಕ್ತಿಯ ಚಹರೆ ಪತ್ತೆ ಆಗುತ್ತಿಲ್ಲ. ಕಟ್ಟಡ ಕುಸಿಯುವುದಕ್ಕೂ ಕೆಲವೇ ನಿಮಿಷಗಳ ಹಿಂದೆ ಏಳುಮಲೈ ಅವರು ಮೊಬೈಲ್‌ ಅನ್ನು ಕಟ್ಟಡದಲ್ಲಿಯೇ ಬಿಟ್ಟು ಹೊರಗೆ ತೆರಳಿರುವ ಸಾಧ್ಯತೆಯೂ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸಿದ ಬಳಿಕವಷ್ಟೇ ಏಳುಮಲೈ ಅವರು ತಪ್ಪಿಸಿಕೊಂಡಿದ್ದಾರೆಯೇ ಅಥವಾ ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆಯೇ ಎಂಬುದು ತಿಳಿಯಲಿದೆ ’ ಎಂದು ಪೊಲೀಸರು ಹೇಳಿದರು.

‘ಆರಂಭಿಕ ಹಂತದಲ್ಲಿ ಮುನಿಯಪ್ಪ ಗುತ್ತಿಗೆ ಪಡೆದುಕೊಂಡಿದ್ದರು. ಮಾಲೀಕ ಮುನಿರೆಡ್ಡಿ ಹಾಗೂ ಮೊದಲನೇ ಗುತ್ತಿಗೆದಾರರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಏಳುಮಲೈ ಅವರಿಗೆ ಉಪ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಕೆಲಸದ ಜತೆಗೆ ಕಾರ್ಮಿಕರನ್ನು ಕರೆತರುವ ಜವಾಬ್ದಾರಿಯನ್ನೂ ಏಳುಮಲೈ ನಿಭಾಯಿಸುತ್ತಿದ್ದರು. ಏಳುಮಲೈ ವಿರುದ್ಧವೂ ಹೆಣ್ಣೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮುನಿರೆಡ್ಡಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರ ಪುತ್ರ ಭುವನ್‌ ರೆಡ್ಡಿ ಹಾಗೂ ಮುನಿಯಪ್ಪ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ

ಬಾಬು ಸಾ ಪಾಳ್ಯದಲ್ಲಿ ಕಟ್ಟಡ ಕುಸಿತದಿಂದ ಮೃತಪಟ್ಟವರ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಮೃತಪಟ್ಟವರ ಮತ್ತು ಗಾಯಗೊಂಡವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಚಿಕಿತ್ಸೆ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಅಗತ್ಯವೆನಿಸಿದರೆ ಯಾವುದೇ ಉನ್ನತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಕಾರ್ಮಿಕ ಇಲಾಖೆಯಿಂದ ತಲಾ ₹3 ಲಕ್ಷ ಬಿಬಿಎಂಪಿಯಿಂದ ತಲಾ ₹2 ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ. ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರದಿಂದಲೇ ಭರಿಸಲಾಗುವುದು. ಗಾಯಗೊಂಡವರಿಗೂ ಪರಿಹಾರ ನೀಡಲಾಗುತ್ತದೆ. ಅದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಿ ಆದೇಶಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.