ADVERTISEMENT

ಬಾಬು ಸಾ ಪಾಳ್ಯ ಕಟ್ಟಡ ಕುಸಿತ: ಉಪಗುತ್ತಿಗೆದಾರ ಏಳುಮಲೈ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:25 IST
Last Updated 25 ಅಕ್ಟೋಬರ್ 2024, 16:25 IST
ಬೆಂಗಳೂರಿನ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸಲಾಯಿತು.
ಪ್ರಜಾವಾಣಿ ಚಿತ್ರ ಬಿ.ಕೆ.ಜನಾರ್ದನ್
ಬೆಂಗಳೂರಿನ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸಲಾಯಿತು. ಪ್ರಜಾವಾಣಿ ಚಿತ್ರ ಬಿ.ಕೆ.ಜನಾರ್ದನ್    

ಬೆಂಗಳೂರು: ಬಾಬು ಸಾ ಪಾಳ್ಯದ ಕಟ್ಟಡ ಕುಸಿದ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ವೇಳೆ ಉಪ ಗುತ್ತಿಗೆದಾರ ಏಳುಮಲೈ ಅವರ ಶವ ಶುಕ್ರವಾರ ಪತ್ತೆಯಾಗಿದೆ.

ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9 ತಲುಪಿದ್ದು, 15 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಸಿಬ್ಬಂದಿ ಮಧ್ಯಾಹ್ನ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದರು.

ಗುರುವಾರ ದಿನವಿಡೀ ಅವಶೇಷಗಳನ್ನು ತೆರವುಗೊಳಿಸಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದ್ದರೂ ಏಳುಮಲೈ ಸುಳಿವು ಪತ್ತೆಯಾಗಿರಲಿಲ್ಲ. ಅವರು ಬಳಸುತ್ತಿದ್ದ ಮೊಬೈಲ್ ಲೊಕೇಷನ್‌  ಇದೇ ವ್ಯಾಪ್ತಿಯಲ್ಲಿ ಇತ್ತು. ಹಾಗಾಗಿ ಅವಶೇಷಗಳಡಿ ಸಿಲುಕಿರಬಹುದು ಎಂಬ ಶಂಕೆಯೊಂದಿಗೆ ಶುಕ್ರವಾರ ಬೆಳಿಗ್ಗೆ ಶೋಧ ಆರಂಭಿಸಿದ್ದರು.  ಕಾರ್ಯಾಚರಣೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಅವಶೇಷಗಳಡಿ ಅವರ ಶವ ಪತ್ತೆಯಾಯಿತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಲಾಯಿತು. 

ADVERTISEMENT

‘ಗುತ್ತಿಗೆ ಕೆಲಸದ ಜತೆಗೆ ಕಾರ್ಮಿಕರನ್ನು ಕರೆತರುವ ಜವಾಬ್ದಾರಿಯನ್ನೂ ಏಳುಮಲೈ ನಿಭಾಯಿಸುತ್ತಿದ್ದರು. ಹಾಗಾಗಿ ಇವರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿತ್ತು’ ಎಂದು ಹೆಣ್ಣೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

ಕಟ್ಟಡದ ಅವಶೇಷಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಎರಡು–ಮೂರು ದಿನಗಳಲ್ಲಿ ಅವಶೇಷಗಳನ್ನು ಸಂಪೂರ್ಣ ತೆರವು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಾಬು ಸಾ ಪಾಳ್ಯದಲ್ಲಿ ಮಂಗಳವಾರ ಏಳು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು, ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಮತ್ತು ತುರ್ತು ಕಾರ್ಯಾಚರಣೆ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು.

ವಿಧಿವಿಜ್ಞಾನ ತಜ್ಞರ ಭೇಟಿ: ಕಟ್ಟಡ ಕುಸಿತ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದರು.

‘ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವು ಕಟ್ಟಡ ನಿರ್ಮಾಣಕ್ಕೆ ಬಳಸಲಾದ ಮಣ್ಣು, ಮರಳು, ಇಟ್ಟಿಗೆಗಳು, ಸಿಮೆಂಟ್ ಮತ್ತು ಉಕ್ಕಿನ ಸರಳುಗಳು, ರಕ್ತದ ಮಾದರಿಗಳನ್ನು ಸಂಗ್ರಹಿಸಿದೆ. ಈ ಮಾದರಿಗಳ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪ್ರಾಥಮಿಕ ವರದಿಗಳ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ ಕಾರಣದಿಂದಲೇ ಕಟ್ಟಡ ಕುಸಿದಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳಿದ್ದಾರೆ.

Cut-off box - ಕಟ್ಟಡ ಕುಸಿತ: ತನಿಖೆ ಆರಂಭ ಬಾಬು ಸಾ ಪಾಳ್ಯದ ಕಟ್ಟಡ ದುರಂತ ಪ್ರಕರಣದಲ್ಲಿ ಮೃತಪಟ್ಟಿದ್ದ ಒಂಬತ್ತು ಮಂದಿಯ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದರು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ ಇವರ ಪುತ್ರ ಭುವನ್ ರೆಡ್ಡಿ ಹಾಗೂ ಕಟ್ಟಡದ ನಾಲ್ಕನೇ ಅಂತಸ್ತಿನವರೆಗೂ ನಿರ್ಮಾಣದ ಜವಾಬ್ದಾರಿ ವಹಿಸಿದ್ದ ಗುತ್ತಿಗೆದಾರ ಮುನಿಯಪ್ಪ ಅವರ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.