ಬೆಂಗಳೂರು: ಸಾರ್ವಜನಿಕರು ಬಾಡಿಗೆಗೆ ನೀಡಿದ್ದ ಸುಮಾರು 120 ಕಾರುಗಳನ್ನು ಕಳ್ಳತನ ಮಾಡಿರುವ ಆರೋಪದಡಿ ‘ಆರ್.ಎಸ್. ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಮಾಲೀಕ ಶಿವಕುಮಾರ್ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.
ತಮಿಳುನಾಡಿನ ಶಿವಕುಮಾರ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಸರ್ಜಾಪುರದಲ್ಲಿ ವಾಸವಿದ್ದ. ನಾಗಸಂದ್ರದ ಎಂಇಐ ಲೇಔಟ್‌ನಲ್ಲಿ ಟ್ರಾವೆಲ್ಸ್ ಕಚೇರಿ ತೆರೆದಿದ್ದ. ಆತನ ವಿರುದ್ಧ ಕಾರುಗಳ ಮಾಲೀಕರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಾಗಿದ್ದು, ಇನ್‌ಸ್ಪೆಕ್ಟರ್ ಎಚ್.ಬಿ. ಸುನೀಲ್ ನೇತೃತ್ವದ ತಂಡ ತನಿಖೆ ಆರಂಭಿಸಿದೆ.
‘ಸಾರ್ವಜನಿಕರ ಜೊತೆ ಒಪ್ಪಂದ ಮಾಡಿಕೊಂಡು, ಅವರ ಮಾಲೀಕತ್ವದ ಕಾರುಗಳನ್ನು ಆರೋಪಿ ಬಾಡಿಗೆಗೆ ಪಡೆಯುತ್ತಿದ್ದ. ಅದೇ ಕಾರುಗಳನ್ನು ತನ್ನ ಟ್ರಾವೆಲ್ಸ್ ಮೂಲಕ ಬೇರೆ ಬೇರೆ ಕಂಪನಿಗಳಿಗೆ ಬಾಡಿಗೆಗೆ ನೀಡುತ್ತಿದ್ದ. ಬಂದ ಲಾಭದಲ್ಲೇ ಕಾರಿನ ಮಾಲೀಕರಿಗೂ ಪಾಲು ನೀಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
’ಪ್ರತಿ ತಿಂಗಳು 8ನೇ ತಾರೀಖಿನೊಳಗೆ ಹಣ ಪಾವತಿ ಮಾಡುವುದಾಗಿ ಕಾರಿನ ಮಾಲೀಕರಿಗೆ ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ಸಾರ್ವಜನಿಕರು, ತಮ್ಮ ಇನ್ನೋವಾ, ಸ್ವಿಫ್ಟ್ ಹಾಗೂ ಇತರೆ ಕಾರುಗಳನ್ನು ಆರೋಪಿಗೆ ನೀಡಿದ್ದರು.’
‘ಅಕ್ಟೋಬರ್ ಮುಗಿದು ನವೆಂಬರ್ ಬಂದರೂ ಮಾಲೀಕರ ಖಾತೆಗಳಿಗೆ ಆರೋಪಿ ಹಣ ಹಾಕಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಕೆಲ ದಿನಗಳಲ್ಲೇ ಹಣ ಜಮೆ ಮಾಡುವುದಾಗಿ ಹೇಳುತ್ತಿದ್ದ. ಇತ್ತೀಚೆಗೆ ಟ್ರಾವೆಲ್ಸ್ ಕಚೇರಿಗೆ ಬೀಗ ಹಾಕಿಕೊಂಡು ಆರೋಪಿ ಪರಾರಿಯಾಗಿದ್ದಾನೆ’ ಎಂದೂ ಮೂಲಗಳು ತಿಳಿಸಿವೆ.
‘ಆರೋಪಿ ಇದುವರೆಗೂ ₹ 10 ಕೋಟಿ ಮೌಲ್ಯದ 120 ಕಾರುಗಳನ್ನು ಸಾರ್ವಜನಿಕರಿಂದ ಬಾಡಿಗೆ ಪಡೆದಿದ್ದನೆಂದು ಗೊತ್ತಾಗಿದೆ. 120 ಕಾರುಗಳು ಎಲ್ಲಿವೆ ಎಂಬ ಮಾಹಿತಿ ಲಭ್ಯವಾಗಿಲ್ಲ. ನಗರದಲ್ಲೇ ಕಾರುಗಳನ್ನು ಬಚ್ಚಿಟ್ಟು ಅಥವಾ ಯಾರಿಗೂ ಮಾರಾಟ ಮಾಡಿ ಆರೋಪಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.