ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ನಾವೀದ್ ಅಹಮದ್, ಅರ್ಷದ್ ಖಾನ್, ಅಪ್ಸರ್ ಪಾಷಾ, ದಾದಾಪೀರ್, ಶದಾಬ್ ಅಹಮದ್ ಖಾನ್, ಇಸ್ರಾರ್ ಅಹಮದ್ ಖಾನ್, ಫುಜೈಲ್ ಅಹಮದ್, ಮೊಹಮದ್ ಇದ್ರೀಸ್ ಮತ್ತು ಅಬ್ರೇಸ್ ಅವರು ಐಎಂಎ ವಂಚನೆ ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸದೆ ಇರುವುದರಿಂದ ಸಿಬಿಐ ಕೋರ್ಟ್ ಜಾಮೀನು ನೀಡಿದೆ.
ಸಿಬಿಐ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣನವರ, ಜಾಮೀನು ನೀಡಲು ಕಾರಣವಾದ ಅಂಶವನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ಕಂಪನಿಗೆ ಠೇವಣಿ ಸಂಗ್ರಹಿಸುವಲ್ಲಿ ಆರೋಪಿಗಳ ಪಾತ್ರವಿಲ್ಲ. ಹೂಡಿಕೆ ಮಾಡುವಂತೆ ಜನರನ್ನು ಪ್ರೇರೇಪಿಸಿಲ್ಲ. ಈ ಪ್ರಕರಣದಲ್ಲಿ ಒಂದನೇ ಆರೋಪಿ ಮನ್ಸೂರ್ ಖಾನ್ ಮಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಸಂಗತಿ ಸಾಕ್ಷ್ಯ ಗಳ ವಿಚಾರಣೆಯಿಂದ ಗೊತ್ತಾಗುತ್ತದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.
‘ಸಿಬಿಐ ಪ್ರಕರಣ ದಾಖಲೆಗಳನ್ನು ಆಧರಿಸಿದೆ. ಸದರಿ ಆರೋಪಿಗಳ ವಿರುದ್ಧದ ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳಿಗೆ ಜಾಮೀನು ಸಿಕ್ಕರೆ ದೇಶ ಬಿಟ್ಟು ಪರಾರಿಯಾಗುತ್ತಾರೆ ಎಂಬ ಪ್ರಾಸಿಕ್ಯೂಷನ್ ವಾದದಲ್ಲಿ ಹುರುಳಿಲ್ಲ. ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಜಾಮೀನು ನೀಡಬಹುದಾಗಿದೆ’ ಎಂದು ಆದೇಶದಲ್ಲಿ ಹೇಳಿದ್ದಾರೆ.
ಸಿಬಿಐ ಪರ ವಾದ ಮಂಡಿಸಿದ ವಕೀಲರು, ‘ವಂಚನೆ ಪ್ರಕರಣದ ತನಿಖೆ ಬಹುಮುಖ್ಯ ಘಟ್ಟ ತಲುಪಿರುವುದರಿಂದ ಜಾಮೀನು ಕೊಡುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.
‘4ನೇ ಆರೋಪಿ ಕಂಪನಿ ವ್ಯವಸ್ಥಾಪಕ (ನಿರ್ವಹಣೆ) ಆಗಿದ್ದು, ಅಧಿಕಾರಿಗಳಿಗೆ ಲಂಚ ನೀಡಿರುವುದರಲ್ಲೂ ಅವರ ಪಾತ್ರವಿದೆ’ ಎಂದು ಸಿಬಿಐ ವಕೀಲರು ವಾದಿಸಿದ್ದರು.
‘ಆರೋಪಿಗಳು ಕೇವಲ ನೌಕರ ರಾಗಿದ್ದು, ಅವರಿಗೆ ಗೊತ್ತಿಲ್ಲ ದಂತೆ ಕಂಪನಿಯ ನಿರ್ದೇಶಕರಾಗಿಯೂ ಆರೋಪಿ ಮನ್ಸೂರ್ ಖಾನ್ ನೇಮಿ ಸಿದ್ದಾರೆ. ಪ್ರಕರಣದಲ್ಲಿ ಅವರ ಪಾತ್ರ ಇಲ್ಲದಿರುವುದರಿಂದ ಜಾಮೀನು ನೀಡಲು ಅಡ್ಡಿಯಿಲ್ಲ ಎಂದು ಆರೋಪಿಗಳ ಪರ ವಕೀಲರು ಪ್ರತಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.