ಬೆಂಗಳೂರು: ‘ಬೈಯಪ್ಪನಹಳ್ಳಿ ಮೂರನೇ ಕೋಚಿಂಗ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಮುಗಿಸಲು ಮಾರ್ಚ್‌ಗೆ ನೀಡಲಾಗಿದ್ದ ಗಡುವನ್ನು ಮೇ ತನಕ ವಿಸ್ತರಿಸಲಾಗಿದೆ. ಈ ಕಾಮಗಾರಿ ಮುಗಿದ ಬಳಿಕವೇಕಂಟೋನ್ಮೆಂಟ್ ನಿಲ್ದಾಣದಲ್ಲಿ ಪ್ರಸ್ತಾವಿತ ಟರ್ಮಿನಲ್ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.
‘ಬೈಯಪ್ಪನಹಳ್ಳಿ ಟರ್ಮಿನಲ್ ಕಾಮಗಾರಿ ಬಹುತೇಕ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ. ಟರ್ಮಿನಲ್ ಉದ್ಘಾ
ಟನೆ ಮಾಡಿದರೆ ಸಾಲದು. ರೈಲುಗಳ ಕಾರ್ಯಾಚರಣೆಯೂ ಆರಂಭಗೊಳ್ಳಬೇಕು. ಅದಕ್ಕಾಗಿ ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶವನ್ನು ಅಧಿಕಾರಿಗಳು ಕೇಳಿದ್ದಾರೆ’ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.
‘ಈ ಟರ್ಮಿನಲ್‌ನ ಸಾಮರ್ಥ್ಯ ಬಳಸಿಕೊಳ್ಳಲು ಕೆಲ ಹೊಸ ರೈಲುಗಳನ್ನು ಪರಿಚಯಿಸಲಾಗುವುದು. ದಿನಕ್ಕೆ 64 ರೈಲುಗಳು ಈ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳಲಿವೆ. ದಿನಕ್ಕೆ ಒಂದು ಲಕ್ಷ ಪ್ರಯಾಣಿಕರು ಇದನ್ನು ಬಳಸಿಕೊಳ್ಳಬಹುದು. ಇದರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಯಶವಂತಪುರ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದರು.
‘ಕಂಟೋನ್ಮೆಂಟ್ ಟರ್ಮಿನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಮುಗಿಯುವ ವೇಳೆಗೆ ಬೈಯಪ್ಪನಹಳ್ಳಿ ಟರ್ಮಿನಲ್ ಕಾಮಗಾರಿ ನಿರ್ವಹಣೆಯಲ್ಲಿ ಸಕ್ರಿವಾಗಿರುವ ಅಧಿಕಾರಿಗಳ ತಂಡ ಬಿಡುವು ಮಾಡಿಕೊಳ್ಳಲಿದೆ. ಅದೇ ತಂಡ ಕಂಟೋನ್ಮೆಂಟ್ ಟರ್ಮಿನಲ್ ಕಾಮಗಾರಿಯಲ್ಲಿ ತೊಡಗಿಕೊಳ್ಳಲಿದೆ’ ಎಂದರು.
‘ಉಪನಗರ ರೈಲಿಗೆ ಹಣ ಮೀಸಲಿಡಿ’
‘ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಅನುಮೋದನೆ ಶೀಘ್ರವೇ ಸಿಗಲಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು’ ಎಂದು ಸುರೇಶ್ ಅಂಗಡಿ ಕೋರಿದರು.
‘ತಾಂತ್ರಿಕ ಕಾರಣಗಳಿಂದಾಗಿ ಸಿಸಿಇಎ ಅನುಮೋದನೆ ವಿಳಂಬವಾಗುತ್ತಿದೆ. ಅವುಗಳನ್ನು ಮಾಧ್ಯಮಗಳಿಗೆ ತಿಳಿಸಲು ಆಗುವುದಿಲ್ಲ. ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.