ADVERTISEMENT

2 ಎ ಮೀಸಲಾತಿ: ಬಲಿಜರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 15:39 IST
Last Updated 7 ಜನವರಿ 2023, 15:39 IST

ಬೆಂಗಳೂರು: ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಜ. 9ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಬಲಿಜ ಸಂಘ ತಿಳಿಸಿದೆ.

‘ಬಲಿಜ ಸಮುದಾಯ ಅತ್ಯಂತ ಹಿಂದುಳಿದಿದ್ದು, ಯಾವುದೇ ಆಯೋಗದ ಶಿಫಾರಸು ಇಲ್ಲದೇ 1994ರಲ್ಲಿ 3 ಎ ಪ್ರವರ್ಗಕ್ಕೆ ಸೇರಿಸಲಾಗಿದೆ. ಇದರಿಂದ ನಮ್ಮ ಜನಾಂಗ ಅತ್ಯಂತ ಹೀನ ಸ್ಥಿತಿಗೆ ತಲುಪಿದೆ. ಸತತ ಹೋರಾಟದ ಫಲವಾಗಿ ಕೇವಲ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ 2 ಎ ಮೀಸಲಾತಿ ಸೌಲಭ್ಯವನ್ನು ನೀಡಲಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ. ವೇಣುಗೋಪಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಗೆ ಸರ್ಕಾರ ಎ,ಬಿ,ಸಿ,ಡಿ ಎಂಬ ಹೊಸ ಮೀಸಲಾತಿಯ ಸೌಲಭ್ಯವನ್ನು ಕಲ್ಪಿಸುತ್ತಿದೆ. ಆದರೆ, ನಮ್ಮಂತಹ ಧ್ವನಿಯಿಲ್ಲದ ಜಾತಿಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಬಲಿಜ ಸಮುದಾಯ 40 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಕೃಷಿ, ಕೂಲಿ, ಹೈನುಗಾರಿಕೆ, ಬಳೆ, ಹೂವು ಹಾಗೂ ಮಂಗಳದ್ರವ್ಯಗಳ ಮಾರಾಟ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಈ ಸಮುದಾಯ 54 ವಿಧಾನಸಭೆ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.’ ಎಂದರು.

ADVERTISEMENT

ಪೂರ್ಣ ಪ್ರಮಾಣದ 2ಎ ಮೀಸಲಾತಿಗೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಲಿಜ ಸಮುದಾಯ ಸರ್ಕಾರಿ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯಿಂದ ವಂಚಿತವಾಗಿದೆ. ಆದ್ದರಿಂದ ಜ. 9ರಂದು ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.