ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಕಡಿಮೆ ಮಾಡಿದ್ದ ಹಾಲಿನ ಖರೀದಿ ದರವನ್ನು ಮತ್ತೆ ₹2 ಹೆಚ್ಚಳ ಮಾಡಲು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ನಿರ್ಧರಿಸಿದೆ.
‘ಕೋವಿಡ್ ಸಂದರ್ಭದಲ್ಲಿ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ದರ ಕಡಿಮೆ ಆಗಿತ್ತು. ಅನಿವಾರ್ಯವಾಗಿ ದರ ಕಡಿಮೆ ಮಾಡಲಾಗಿತ್ತು. ಈಗ ಹಾಲಿನ ಪುಡಿ, ಬೆಣ್ಣೆ ಮತ್ತು ಇತರ ಉತ್ಪನ್ನಗಳ ದರ ಏರಿಕೆಯಾಗಿದೆ. ಹೀಗಾಗಿ ಮತ್ತೆ ದರ ಹೆಚ್ಚಳ ಮಾಡಲಾಗಿದೆ’ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಬಮೂಲ್ ವ್ಯಾಪ್ತಿಯಲ್ಲಿ ದಿನಕ್ಕೆ 17.2 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 2209 ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳಿದ್ದು, ಅವುಗಳಲ್ಲಿ 1,24,600 ಉತ್ಪಾದಕರಿದ್ದಾರೆ. ಎಲ್ಲ ರೈತರು ದರ ಹೆಚ್ಚಳದ ಲಾಭ ಪಡೆದುಕೊಳ್ಳಲಿದ್ದಾರೆ. ಫೆ.6ರಿಂದ ಹೊಸ ದರ ಅನ್ವಯವಾಗಲಿದೆ’ ಎಂದು ಹೇಳಿದರು.
‘ಲಾಕ್‌ಡೌನ್‌ಗೂ ಮುನ್ನ 19 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿತ್ತು. ಲಾಕ್‌ಡೌನ್ ಆದ ಕೂಡಲೇ ಈ ಪ್ರಮಾಣ 7 ಲಕ್ಷ ಲೀಟರ್‌ಗೆ ಕುಸಿಯಿತು. ಆ ಸಂದರ್ಭದಲ್ಲಿ ಹಾಲಿನ ಪುಡಿ ಮತ್ತು ಬೆಣ್ಣೆ ಉತ್ಪಾದನೆಗೆ ಆದ್ಯತೆ ನೀಡಲಾಯಿತು. ಸರ್ಕಾರ ಕೂಡ ಹಾಲು ಖರೀದಿ ಮಾಡಿ ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದರಿಂದ ಅನುಕೂಲವಾಯಿತು. ಈಗ ಹಾಲು ಮಾರಾಟ ಚೇತರಿಸಿಕೊಂಡಿದೆ’ ಎಂದು ವಿವರಿಸಿದರು.
ಮಾರಾಟ ದರ ಹೆಚ್ಚಳಕ್ಕೂ ಮನವಿ
ಹಾಲು ಮಾರಾಟ ದರ ₹5 ಹೆಚ್ಚಳ ಮಾಡುವಂತೆ ಕೆಎಂಎಫ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.
‘ಮಾರಾಟ ದರ ಹೆಚ್ಚಳ ಮಾಡಿದರೆ ಅದನ್ನು ಉತ್ಪಾದಕರಿಗೆ ವರ್ಗಾಯಿಸಬಹುದು. ಆಗ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಬಮೂಲ್ ಮಾತ್ರವಲ್ಲ ಎಲ್ಲ 14 ಒಕ್ಕೂಟಗಳೂ ಮನವಿ ಸಲ್ಲಿಸಿವೆ’ ಎಂದು ಹೇಳಿದರು.
‘ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೆಚ್ಚಳ ಮಾಡುವುದು ಕೆಎಂಎಫ್‌ಗೆ ಬಿಟ್ಟ ವಿಷಯ. ರೈತರ ಪರವಾಗಿ ನಾವು ಮನವಿ ಸಲ್ಲಿಸಿದ್ದೇವೆ’ ಎಂದರು.
ಬಮೂಲ್‌ಗೆ ರಫ್ತು ಪರವಾನಗಿ
‘ನಂದಿನಿ ಉತ್ಪನ್ನಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರದಿಂದ ರಫ್ತು ಪರವಾನಗಿ ದೊರೆತಿದೆ’ ಎಂದು ನರಸಿಂಹಮೂರ್ತಿ ಹೇಳಿದರು.
‘ರಫ್ತು ಪರವಾನಗಿ ಪಡೆದಿರುವ ರಾಜ್ಯದ ಮೊದಲ ಹಾಲು ಒಕ್ಕೂಟ ಎಂಬ ಹೆಗ್ಗಳಿಕೆಗೆ ಬಮೂಲ್ ಪಾತ್ರವಾಗಿದೆ. ಯಾವ ದೇಶಗಳಲ್ಲಿ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಇದೆ ಎಂಬುದನ್ನು ಪರಿಶೀಲಿಸಿ ರಫ್ತು ಮಾಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.