ADVERTISEMENT

ರಾಜಕಾಲುವೆ ಅಕ್ಕಪಕ್ಕದ 50 ಅಡಿ ಕಟ್ಟಡಕ್ಕೆ ನಿಷೇಧ: ಡಿ.ಕೆ. ಶಿವಕುಮಾರ್‌

ಅಪಾಯಕಾರಿ, ಅನಧಿಕೃತ ಕಟ್ಟಡಗಳ ಸಮೀಕ್ಷೆ, ತೆರವು: ಡಿಸಿಎಂ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:05 IST
Last Updated 24 ಅಕ್ಟೋಬರ್ 2024, 16:05 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಕೆರೆಗಳ ನಡುವೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಅಕ್ಕಪಕ್ಕ 50 ಅಡಿ ಅಂತರದಲ್ಲಿ ಕಟ್ಟಡ ನಿರ್ಮಾಣ ನಿಷೇಧಿಸುವುದು ಹಾಗೂ ಅಪಾಯಕಾರಿ, ಅನಧಿಕೃತ ಕಟ್ಟಡಗಳ ತೆರವು ಮಾಡಲು ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಮಳೆ ಸಮಸ್ಯೆಯ ಅವಲೋಕನ ಹಾಗೂ ಶಾಶ್ವತ ಪರಿಹಾರ ಕುರಿತು ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.

‘ರಾಜಕಾಲುವೆ ಅಕ್ಕಪಕ್ಕದಲ್ಲಿ 50 ಅಡಿಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು, ಇಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಒತ್ತುವರಿ ನಿಲ್ಲುತ್ತದೆ, ಮಳೆನೀರು ಹರಿಯಲು ನೆರವಾಗುತ್ತದೆ. ಯೋಜನೆಯ ಆರಂಭಿಕ ಹಂತಕ್ಕೆ ಹಣ ಮೀಸಲಿಡಲಾಗಿದೆ’ ಎಂದರು.

ADVERTISEMENT

ತೆರವಿಗೆ ಸೂಚನೆ: ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಅನೇಕ ಕಟ್ಟಡಗಳನ್ನು ಒಡೆದು ಹಾಕಲು ಆದೇಶ ನೀಡಲಾಗಿದೆ. ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸರ್ಕಾರಕ್ಕೆ ಯಾವುದೇ ಆಸ್ತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಧಿಕಾರವಿದೆ. ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ ಕಾಯ್ದೆಗೆ ಕೆಲವು ತಿದ್ದುಪಡಿ ತಂದು ಹೆಚ್ಚಿನ ಅಧಿಕಾರ ನೀಡಲಾಗುವುದು. ಕಂದಾಯ ಬಡಾವಣೆಯಾಗಿರಲಿ, ಬೇರೆ ಬಡಾವಣೆಯಾಗಿರಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಒತ್ತುವರಿ ನಿಲ್ಲಿಸಲು ಸುಗ್ರೀವಾಜ್ಞೆ ತರಲು ಗೃಹ ಇಲಾಖೆ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ. ಈ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ, ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಡ್ರೋನ್‌ ಮೂಲಕ ಕಟ್ಟಡಗಳ ಸಮೀಕ್ಷೆ

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಖಾಸಗಿ ಹಾಗೂ ಪಾಲಿಕೆಯಿಂದ ಸೋಮವಾರದಿಂದ ಸಮೀಕ್ಷೆ ನಡೆಸಲಾಗುವುದು. ಕಾನೂನುಬಾಹಿರ ನಿರ್ಮಾಣಗಳನ್ನು ಪತ್ತೆ ಹಚ್ಚಿ, ಪ್ರತಿ ಕಟ್ಟಡದ ಚಿತ್ರ ಹಾಗೂ ವಿಡಿಯೊಗಳನ್ನು ಸಂಗ್ರಹಿಸಲಾಗುವುದು. ಜಂಟಿ ಆಯುಕ್ತರ ನೇತೃತ್ವದಲ್ಲಿ ಡ್ರೋನ್ ಕ್ಯಾಮೆರಾಗಳಿಂದ ಮೇಲ್ವಿಚಾರಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬಿಎಂಆರ್‌ಡಿಎ ಹಾಗೂ ಬಿಎಂಟಿಎಫ್ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಲಿದ್ದು, ಈ ಪ್ರದೇಶಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಒಂದು ವಾರದಲ್ಲಿ ವರದಿ

‘ಮಳೆ ನೀರು ವಸತಿ ಪ್ರದೇಶಗಳಿಗೆ ನುಗ್ಗಿ ಸಮಸ್ಯೆ ಎದುರಾಗುತ್ತಿರುವ ಎಲ್ಲ ಪ್ರದೇಶಗಳಲ್ಲಿ ಪರಿಹಾರಕ್ಕೆ ಯೋಜನೆ ರೂಪಿಸಿ, ಅಗತ್ಯವಿರುವ ಹಣಕಾಸಿನ ಅಂದಾಜು ನೀಡಲು ವಲಯವಾರು ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಹಾಗೂ ಮಳೆ ನೀರುಗಾಲುವೆ ನಿರ್ವಹಣೆ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಒಂದು ವಾರದ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಕೆರೆಗಳ ನಡುವೆ ಸಂಪರ್ಕ ಏರ್ಪಡಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ‘ಮಾಸ್ಟರ್ ಪ್ಲಾನ್’ ಸಿದ್ಧಪಡಿಸಲು ಸೂಚಿಸಲಾಗಿದೆ. ಕೆರೆಯಿಂದ ಕೋಡಿ ಬೀಳುವ ನೀರು ಸರಾಗವಾಗಿ ಹೋಗಲು ಅನುವಾಗುವಂತೆ ಗೇಟ್ ಅಳವಡಿಸಲಾಗುತ್ತದೆ.  ಕೆರೆಗಳಿಗೆ ಕೇವಲ ಮಳೆ ನೀರು ಹೋಗುವಂತೆ ನೋಡಿಕೊಳ್ಳಬೇಕು. ಈ ಕಾಮಗಾರಿಗೆ ಖಾಸಗಿ ಜಮೀನು ಅಗತ್ಯವಿದ್ದರೆ ಟಿಡಿಆರ್ ನೀಡುವ ಮೂಲಕ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದೇವೆ’ ಎಂದು ಹೇಳಿದರು.

ವಾಡಿಕೆಗಿಂತ ಹೆಚ್ಚು ಮಳೆ:

‘ಮಳೆ ನಮ್ಮ ನಿಮ್ಮ ಕೈಯಲ್ಲಿ ಇಲ್ಲ. 100 ವರ್ಷಗಳಲ್ಲೇ ದಾಖಲೆಯ ಮಳೆ ಬಂದಿದೆ. ಕೇಂದ್ರಿಯ ವಿಹಾರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಿವಾಸಿಗಳನ್ನು ಸ್ಥಳಾಂತರ ಮಾಡಿದ್ದೇವೆ. ನೀರನ್ನು ಹೊರತೆಗೆಯಲಾಗುತ್ತಿದೆ. ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಲು ಒಪ್ಪದ ಕಾರಣ ಅವರ ಜವಾಬ್ದಾರಿ ವಹಿಸಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.