ADVERTISEMENT

ಎದೆಹಾಲು ವಾಣಿಜ್ಯೀಕರಣಕ್ಕೆ ತಡೆ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:42 IST
Last Updated 13 ನವೆಂಬರ್ 2024, 23:42 IST
<div class="paragraphs"><p>ಹೈಕೋರ್ಟ್‌&nbsp;</p></div>

ಹೈಕೋರ್ಟ್‌ 

   

ಬೆಂಗಳೂರು: ‘ತಾಯಂದಿರ ಎದೆ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ಅದನ್ನು ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ಎದೆಹಾಲಿನ ವಾಣಿಜ್ಯೀಕರಣ ತಡೆಯಬೇಕು’ ಎಂದು ಕೋರಿ ಮರಳ ಕುಂಟೆಯ ಮುನೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ್‌ ಕಾಮತ್‌, ‘ಎದೆ ಹಾಲು ಸಂಗ್ರಹಕ್ಕೆ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಿರುವ ಪರವಾನಗಿ ರದ್ದು ಗೊಳಿಸಿ ಎಂದು ರಾಜ್ಯ ಸರ್ಕಾರಕ್ಕೆ, ಕೇಂದ್ರ ಆಯುಷ್‌ ಸಚಿವಾಲಯ ಇತ್ತೀಚೆಗಷ್ಟೇ ನಿರ್ದೇಶನ ನೀಡಿದೆ. ರಾಜ್ಯಗಳು ನೀಡಿ ರುವ ಪರವಾನಿಗೆಗಳನ್ನು ರದ್ದುಗೊಳಿಸುವಂತೆಯೂ ನಿರ್ದೇಶಿಸಿದೆ’ ಎಂದರು.

ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್‌ ವಕೀಲ ಬಿ.ವಿಶ್ವೇಶ್ವರಯ್ಯ ‘ಕೆಲವು ಬಹು ರಾಷ್ಟ್ರೀಯ ಕಂಪನಿಗಳು ತಾಯಂದಿರ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿವೆ. ಇದರಿಂದ ವಾಣಿಜ್ಯ ಪ್ರಯೋಜನ ಪಡೆಯುತ್ತಿವೆ’ ಎಂಬ ಅಂಶವನ್ನು ಪುನರುಚ್ಚರಿಸಿದರು.

‘ಪ್ರಕರಣದಲ್ಲಿ ಆಯುಷ್‌ ಸಚಿವಾ ಲಯವನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಲು ತಿದ್ದುಪಡಿ ಮಾಡಿ’ ಎಂದು ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ಆಯುಷ್‌ ಸಚಿವಾಲಯಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ಕೆಲ ಖಾಸಗಿ ಸಂಸ್ಥೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ತಾಯಂದಿರಿಗೆ ಹಣ ನೀಡಿ ಎದೆಹಾಲು ಸಂಗ್ರಹಿಸಿ, ನಂತರ ಅದನ್ನು ಪೌಡರ್‌ ರೂಪದಲ್ಲಿ ದೇಶದಾದ್ಯಂತ ಮಾರಾಟ ಮಾಡುತ್ತಿವೆ. ತಾಯಂದಿರ ಎದೆಹಾಲನ್ನು ನವಜಾತ ಶಿಶುಗಳಿಗೆ ಉಣಿಸಲು ಮಾತ್ರವೇ ಬಳಸಬಹುದು. ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕೆ ಬಳಸ ಬಾರದು ಎಂದು ಆರೋಗ್ಯ ಇಲಾಖೆ ಯಡಿ ಕಾರ್ಯ ನಿರ್ವಹಿಸುವ ಹಾಲು ಣಿಸುವ ನಿರ್ವಹಣಾ ಕೇಂದ್ರಗಳಿಗೆ 2017 ರಲ್ಲಿಯೇ ಮಾರ್ಗಸೂಚಿ ನಿಗದಿಪಡಿ ಸಲಾಗಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.