ಬೆಂಗಳೂರು: ‘ಮದುವೆಯಾದಾಗಿನಿಂದ ಪತಿಯು ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲ’ ಎಂದು ಮಹಿಳೆಯೊಬ್ಬರು ನೀಡಿರುವ ದೂರು ಆಧರಿಸಿ ಬಾಣಸವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ 37 ವರ್ಷದ ಮಹಿಳೆ, ತಮ್ಮ ಪತಿ ಹಾಗೂ ಅತ್ತೆ– ಮಾವ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ 11ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮಹಿಳೆಯ ದೂರು ಆಧರಿಸಿ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಆದೇಶದನ್ವಯ ಬಾಣಸವಾಡಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ದೂರುದಾರರಿಗೆ ಹೇಳಿದ್ದಾರೆ. ಜೊತೆಗೆ, ಪತಿ ಹಾಗೂ ಅತ್ತೆ– ಮಾವ ಅವರನ್ನು ವಿಚಾರಣೆಗೂ ಒಳಪಡಿಸುತ್ತಿದ್ದಾರೆ.
ಮಹಿಳೆಯ ದೂರಿನ ವಿವರ: ‘2012ರ ನವೆಂಬರ್‌ನಲ್ಲಿ ನನ್ನ ಮದುವೆಯಾಗಿದೆ. ಅಂದಿನಿಂದಲೇ ಪತಿಯು ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿರುವುದಿಲ್ಲ. ಆ ಬಗ್ಗೆ ಕೇಳಿದಾಗ ಸರಿಯಾದ ಉತ್ತರವನ್ನೂ ನೀಡಿರಲಿಲ್ಲ’ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ.
‘ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಟೇಬಲ್ ಡ್ರಾಯರ್‌ನಲ್ಲಿ, ಪತಿಯ ವೈದ್ಯಕೀಯ ತಪಾಸಣಾ ವರದಿ ಸಿಕ್ಕಿತ್ತು. ಪತಿಗೆ ಯಾವುದೋ ಕಾಯಿಲೆ ಇರುವುದು ಗೊತ್ತಾಯಿತು. ಅದೇ ಕಾರಣಕ್ಕೆ ಅವರು ನನ್ನೊಂದಿಗೆ ದೈಹಿಕ ಸಂಬಂಧ ಹೊಂದುತ್ತಿಲ್ಲವೆಂಬುದು ತಿಳಿಯಿತು.’
‘ಪತಿಗೆ ಕಾಯಿಲೆ ಇರುವ ವಿಷಯ ಅವರ ತಂದೆ–ತಾಯಿಗೂ ಗೊತ್ತಿತ್ತು. ಆದರೆ, ಅವರಿಬ್ಬರು ವಿಷಯ ಮುಚ್ಚಿಟ್ಟು ನನ್ನ ಜೊತೆ ಮಗನ ಮದುವೆ ಮಾಡಿಸಿದ್ದಾರೆ. ಮೂವರು ಸೇರಿ ನನಗೆ ವಂಚಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಮಹಿಳೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.