ಬೆಂಗಳೂರು: ಮೂಲಸೌಕರ್ಯ ಇಲ್ಲ, ಕುಡಿಯುವ ನೀರಿಲ್ಲ, ಉದ್ಯಾನಗಳಿಲ್ಲ, ಪಾದಚಾರಿ ಮಾರ್ಗಗಳಿಲ್ಲ, ನೆಮ್ಮದಿಯ ಬದುಕಂತೂ ಇಲ್ಲವೇ ಇಲ್ಲ...
ಇದು ಎಲ್ಲ ಇಲ್ಲಗಳ ನಡುವಿನ ಬನಶಂಕರಿ 6ನೇ ಹಂತದ ಸ್ಥಿತಿ. ರಾಜರಾಜೇಶ್ವರಿನಗರಕ್ಕೆ ಹೊಂದಿಕೊಂಡಂತೆ ನೈಸ್ ರಸ್ತೆ ಬದಿಯಲ್ಲಿರುವ ಈ ಬಡಾವಣೆ ಹೆಸರಿಗಷ್ಟೇ ಪ್ರತಿಷ್ಠಿತ ಬಡಾವಣೆ. ಆದರೆ, ಇಲ್ಲಿ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ.
ಕರಿಯನಪಾಳ್ಯ, ಗುಬ್ಬಲಾಳ, ಗಾಣಗಲ್ಲು, ಚಿಕ್ಕೇಗೌಡನಪಾಳ್ಯ, ಪಟ್ಟೇಗಾರಪಾಳ್ಯ ಸುತ್ತಮುತ್ತಲ ಹಲವು ಹಳ್ಳಿಗಳ ಜಮೀನನ್ನು 1999ರಲ್ಲಿ ಸ್ವಾಧೀನಪಡಿಸಿಕೊಂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, 20 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು 14 ಬ್ಲಾಕ್‌ಗಳಲ್ಲಿ ಅಭಿವೃದ್ಧಿಪಡಿಸಿದೆ. ನಿವೇಶನಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗಿದ್ದು, ಬಹುತೇಕ ಮನೆಗಳು ನಿರ್ಮಾಣವಾಗಿವೆ.
ತುರಹಳ್ಳಿ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಈ ಬಡಾವಣೆಯಲ್ಲಿ ಉತ್ತಮವಾದ ಹವಾಗುಣ ಇದೆ. ಬೆಂಗಳೂರು ನಗರದೊಳಗಿನ ಉಷ್ಣಾಂಶಕ್ಕಿಂತ ಕಡಿಮೆ ಉಷ್ಣಾಂಶ ಇರುತ್ತದೆ. ಆದರೆ, ಮೂಲ ಸೌಕರ್ಯ ಇಲ್ಲದೆ ನಿವಾಸಿಗಳು ಬಳಲುತ್ತಿದ್ದಾರೆ.
20 ವರ್ಷಗಳಷ್ಟು ಹಳೆಯದಾದ ಈ ಬಡಾವಣೆಯಲ್ಲಿ ಕುಡಿಯುವ ನೀರಿನ ಸಂಪರ್ಕವನ್ನೇ ಬಿಡಿಎ ಕಲ್ಪಿಸಿಲ್ಲ. ಕಾವೇರಿ ನೀರಿನ ಕೊಳವೆ ಈ ಬಡಾವಣೆ ಪಕ್ಕದಲ್ಲಿ ಹಾದು ಹೋಗಿದೆ. ಆದರೆ, ಈ ಬಡಾವಣೆಗಳಿಗೆ ಮಾತ್ರ ಕಾವೇರಿ ನೀರಿನ ಭಾಗ್ಯ ದೊರೆತಿಲ್ಲ.
‘ಕೊಳವೆ ಬಾವಿ ಮೂಲಕವಾದರೂ ನೀರು ಪೂರೈಸುವ ವ್ಯವಸ್ಥೆಯನ್ನೂ ಬಿಡಿಎ ಮಾಡಿಲ್ಲ. ನಮ್ಮ ನಿವೇಶನಗಳಲ್ಲಿ ಕೊಳವೆ ಬಾವಿಗಳಲ್ಲಿನ ನೀರೇ ನಮಗೆ ಜೀವ ಜಲ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ನಿತ್ಯ ಪರದಾಡುವ ಸ್ಥಿತಿ ಇದೆ. ಪ್ರತಿದಿನವೂ ಹಣ ಪಾವತಿಸಿ ಟ್ಯಾಂಕರ್ ನೀರು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.
‘ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಬಿಡಿಎ ಪ್ರತಿಷ್ಠಿತ ಬಡಾವಣೆ ಎಂದು ಹೆಸರಿಸುತ್ತದೆ. ನಾಗರಿಕರಿಗೆ ಕುಡಿಯುವ ನೀರಿನ ಸೌಕರ್ಯವನ್ನೇ ಕಲ್ಪಿಸದೆ ಪ್ರತಿಷ್ಠಿತ ಬಡಾವಣೆ ಆಗುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ.
ಬಡಾವಣೆಯ ಒಳಚರಂಡಿ ವ್ಯವಸ್ಥೆಯೂ ಸಮಪರ್ಕವಾಗಿಲ್ಲ. ಎಲ್ಲೆಂದರಲ್ಲಿ ಬಾಯಿ ತೆರೆದಿರುವ ಮ್ಯಾನ್‌ಹೋಲ್‌ಗಳು ಸಾಮಾನ್ಯವಾಗಿವೆ. ತ್ಯಾಜ್ಯ ಸಂಸ್ಕರಣ ಘಟಕಗಳು ಇಲ್ಲದಿರುವುದರಿಂದ ಒಳಚರಂಡಿ ನಿರ್ವಹಣೆ ಇಲ್ಲವಾಗಿದೆ. ಕೆಲವೆಡೆ ಒಂದು ಮ್ಯಾನ್‌ಹೋಲ್‌ನಿಂದ ಇನ್ನೊಂದು ಮ್ಯಾನ್‌ಹೋಲ್‌ಗೆ ಪೈಪ್ ಅಳವಡಿಕೆಯೇ ಆಗದೆ ನೀರು ರಸ್ತೆಗೆ ಹರಿಯುವ ಸ್ಥಿತಿ ಇದೆ. ಇದರಿಂದ ಸಾಂಕ್ರಾಮಿಕ ರೋಗದ ಬೀತಿ ಕಾಡುತ್ತಿದೆ ಎಂದು 2ನೇ ಬ್ಲಾಕ್ ನಿವಾಸಿಗಳು ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.