ADVERTISEMENT

ಬಾಣಸವಾಡಿ: ಪ್ರಜಾವಾಣಿ ವರದಿ ಪರಿಣಾಮ- ಬಿಡಿಎ ಸ್ವತ್ತು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:44 IST
Last Updated 11 ಡಿಸೆಂಬರ್ 2023, 14:44 IST
ಬಾಣಸವಾಡಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ವಾಣಿಜ್ಯ ಕಟ್ಟಡವನ್ನು ಸೋಮವಾರ ತೆರವುಗೊಳಿಸಿ, ಬಿಡಿಎ ಫಲಕ ಅಳವಡಿಸಿದೆ
ಬಾಣಸವಾಡಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ವಾಣಿಜ್ಯ ಕಟ್ಟಡವನ್ನು ಸೋಮವಾರ ತೆರವುಗೊಳಿಸಿ, ಬಿಡಿಎ ಫಲಕ ಅಳವಡಿಸಿದೆ   

ಬೆಂಗಳೂರು: ಬಾಣಸವಾಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಸ್ವಾಧೀನಪಡಿಸಿಕೊಂಡಿದ್ದ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸಿ, ಆ ಜಾಗವನ್ನು ಬಿಡಿಎ ವಶಕ್ಕೆ ತೆಗೆದುಕೊಂಡಿದೆ.

ಬಿಡಿಎ ಆಯುಕ್ತ ಎನ್‌. ಜಯರಾಮ್‌ ಅವರ ಆದೇಶದಂತೆ ಬಿಡಿಎ ಎಂಜಿನಿಯರಿಂಗ್ ವಿಭಾಗ ಹಾಗೂ ಬಿಡಿಎ ಎಸ್ಪಿ ನಂಜುಂಡೇಗೌಡ ಅವರ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದರು. ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸಿ, ಅಲ್ಲಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು, ಆ ಜಾಗದಲ್ಲಿ ‘ಬಿಡಿಎ ಸ್ವತ್ತು’ ಎಂದು ಫಲಕ ಅಳವಡಿಸಲಾಗಿದೆ.

1980ರಲ್ಲಿ ಎಚ್‌ಆರ್‌ಬಿಆರ್‌ ಬಡಾವಣೆ ನಿರ್ಮಾಣಕ್ಕಾಗಿ ಬಾಣಸವಾಡಿ ಗ್ರಾಮದ ಸರ್ವೆ ನಂ. 261ರ 1 ಎಕರೆ 32 ಗುಂಟೆ ಪೂರ್ಣ ಜಮೀನನ್ನು ಬಿಡಿಎ ಸ್ವಾಧೀನಪಡಿಸಿತ್ತು. ಅದರಲ್ಲಿ 6.5 ಗುಂಟೆ ಜಮೀನನ್ನು ಮಾರಾಟ ಮಾಡಿ, ಖಾತೆ, ಪಹಣಿ ಪಡೆದುಕೊಳ್ಳಲಾಗಿತ್ತು. ಬಿಡಿಎ ಭೂಸ್ವಾಧೀನಾಧಿಕಾರಿ, ‘ಸ್ವಾಧೀನ ಪ್ರಕ್ರಿಯೆಯಿಂದ ಭೂಮಿಯನ್ನು ಕೈಬಿಟ್ಟಿಲ್ಲ’ ಎಂಬ ಸ್ಪಷ್ಟ ಮಾಹಿತಿ ನೀಡಿದ್ದರೂ, ಇಂದಿಗೂ ಬಿಡಿಎ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಂಡಿರಲಿಲ್ಲ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ ಡಿ.8ರ ಶುಕ್ರವಾರ ‘ಬಿಡಿಎ ಜಾಗ ಖಾಸಗಿಯವರಿಗೆ ಮಾರಾಟ!’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಆಯುಕ್ತ ಜಯರಾಮ್‌ ಸುಮಾರು 7 ಸಾವಿರ ಚದರ ಅಡಿ ಭೂಮಿ ವಶಕ್ಕೆ ಪಡೆದುಕೊಳ್ಳುವುದಾಗಿ ಹೇಳಿದ್ದರು. ಅದರಂತೆ, ಸೋಮವಾರ ಕಾರ್ಯಾಚರಣೆ ನಡೆದಿದೆ. ‘ಭೂಸ್ವಾಧೀನವಾಗಿಲ್ಲ ಎಂದು ಹಿಂಬರಹ ನೀಡಿದ, ಖಾತಾ, ಪಹಣಿ ಒದಗಿಸಿದ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳಲೂ ಆಯುಕ್ತರು ಸೂಚಿಸಿದ್ದಾರೆ. ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ’ ಎಂದು ಬಿಡಿಎ ಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.