ಬೆಂಗಳೂರು: ‘ಜಗತ್ತಿನಲ್ಲಿ ಇಂದು ಹಿಂಸೆ, ದ್ವೇಷ ಕಾಣುತ್ತೇವೆ. ಧರ್ಮ, ಜಾತಿ, ಅಧಿಕಾರದ ಹೆಸರಿನಲ್ಲಿ ಕಿತ್ತಾಡುತ್ತಿದ್ದೇವೆ. ಪಂಪ, ರನ್ನ, ಜನ್ನ ಆಗಲೇ ತಮ್ಮ ಕೃತಿಗಳಲ್ಲಿ ಜಾತಿ–ಧರ್ಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದುನಿವೃತ್ತ ಪ್ರಾಧ್ಯಾಪಕಭಕ್ತರಹಳ್ಳಿ ಕಾಮರಾಜ್ ತಿಳಿಸಿದರು.
ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲೆ ಆಯೋಜಿಸಿದ್ದ ‘ಕನ್ನಡ ಸಾಹಿತ್ಯದಲ್ಲಿ ಜಾತಿ–ವರ್ಗ ವಿರೋಧ’ ಆನ್‌ಲೈನ್ ವಿಚಾರಗೋಷ್ಠಿಯಲ್ಲಿ ‘ಪ್ರಾಚೀನ ಕನ್ನಡ ಸಾಹಿತ್ಯ’ದ ಬಗ್ಗೆ ಮಾತನಾಡಿದರು.‘ಪಂಪ, ರನ್ನ, ಜನ್ನ ರಾಜಾಶ್ರಯದಲ್ಲಿದ್ದರೂ ರಾಜರಿಗೆ ತಮ್ಮ ವ್ಯಕ್ತಿತ್ವವನ್ನು ಮಾರಿಕೊಂಡಿರಲಿಲ್ಲ. ರಾಜರಿಗೆ ಹತ್ತಿರವಿದ್ದರೂ ಅಂತರ ಕಾಯ್ದುಕೊಂಡಿದ್ದರು. ಪಂಪನು ‘ವಿಕ್ರಮಾರ್ಜುನ ವಿಜಯ’ ಗ್ರಂಥದಲ್ಲಿ ಕರ್ಣನ ಮೂಲಕ ಜಾತಿಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುತ್ತಾನೆ.ರನ್ನನ ‘ಗದಾಯುದ್ಧ’ದಲ್ಲಿ ಕೂಡ ಅವಕಾಶ ಸಿಕ್ಕಾಗಲೆಲ್ಲ ಜಾತಿ ವ್ಯವಸ್ಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.ಜನ್ನನ ‘ಯಶೋಧರೆ ಚರಿತೆ’ ಕೃತಿಯು ಸಮಾನತೆ ತತ್ವವನ್ನು ಎತ್ತಿಹಿಡಿಯುತ್ತದೆ’ ಎಂದು ಹೇಳಿದರು.
‘ಮಧ್ಯಕಾಲೀನ ಕನ್ನಡ ಸಾಹಿತ್ಯ’ದ ಬಗ್ಗೆ ಮಾತನಾಡಿದಲೇಖಕಿ ಪುಷ್ಪಭಾರತಿ, ‘ಸಮಾಜ ಪರಿಷ್ಕರಿಣೆಯ ಜಾಗೃತಿ ಹೊಣೆ ಹೊತ್ತು ಸಾಹಿತ್ಯ ಬೆಳೆದಿದೆ. 12ರಿಂದ 18ನೇ ಶತಮಾನವನ್ನು ಮಧ್ಯಕಾಲಿನ ಸಾಹಿತ್ಯದ ಘಟ್ಟ ಎಂದು ಗುರುತಿಸಲಾಗಿದೆ. ಸಾಹಿತ್ಯವನ್ನು ಶ್ರೀಸಾಮಾನ್ಯನ ಮಟ್ಟಕ್ಕೆ ತಂದದ್ದು ಈ ಕಾಲದಲ್ಲಿ. ಜನಸಾಮಾನ್ಯರ ಜೀವನದಲ್ಲಿ ಜಾತಿ ಮತ್ತು ಧರ್ಮ ಭದ್ರವಾಗಿ ತಳವೂರಿದೆ. ವಚನಕಾರರು ತಮ್ಮ ವಚನಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಧ್ಯಕಾಲಿನ ಕನ್ನಡ ಸಾಹಿತ್ಯವು ಜಾತಿ ಮತ್ತು ಧರ್ಮವನ್ನು ಪ್ರಬಲವಾಗಿ ವಿರೋಧ ಮಾಡಿದೆ’ ಎಂದರು.
‘ಆಧುನಿಕ ಕನ್ನಡ ಸಾಹಿತ್ಯ’ದ ಬಗ್ಗೆ ಮಾತನಾಡಿದ ರಾಜಪ್ಪ ದಳವಾಯಿ, ‘ಜಾತಿ–ಧರ್ಮದಿಂದ ಬಿಡುಗಡೆ ಹೊಂದುವ ಕೆಲಸವನ್ನು ಕನ್ನಡ ಸಾಹಿತ್ಯ ಮಾಡಿತು. ಲೇಖಕನಾದವನು ಅದನ್ನು ಮೀರಿರಬೇಕಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.