ಬೆಂಗಳೂರು: ‘ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕ್ರಮ ಸಂವಿಧಾನಬದ್ಧವಾದುದು. ಈ ಸಂಬಂಧ ರಾಜ್ಯ ಸರ್ಕಾರದ್ದು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಡೆಯಾಗಿತ್ತು’ ಎಂದು ಪ್ರಾಧ್ಯಾಪಕ ಕಿರಣ್ ಗಾಜನೂರು ಹೇಳಿದರು.
ಬಂಡಾಯ ಸಾಹಿತ್ಯ ಸಂಘಟನೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ, ‘ಕರ್ನಾಟಕ ಮತ್ತು ಉದ್ಯೋಗ ನೀತಿ’ ಕುರಿತು ಅವರು ಮಾತನಾಡಿದರು. ‘ನಮ್ಮದು ಕೇಂದ್ರೀಕೃತ ಒಕ್ಕೂಟ ವ್ಯವಸ್ಥೆ ಅಥವಾ ಅರೆ ಒಕ್ಕೂಟ ವ್ಯವಸ್ಥೆ. ಇಲ್ಲಿ ರಾಜ್ಯಗಳು ಕೆಲವು ವಿಶಿಷ್ಟ ಸಮಸ್ಯೆಗಳನ್ನು ಎದುರಿಸುತ್ತವೆ. ಕರ್ನಾಟಕದಲ್ಲಿ ಸ್ಥಳೀಯರ ಉದ್ಯೋಗಕ್ಕೆ ಸಂಬಂಧಿಸಿದಂತೆ ಇಂತಹ ಸಮಸ್ಯೆ ಇದೆ’ ಎಂದರು.
‘ಖಾಸಗಿ ಕ್ಷೇತ್ರದಲ್ಲೂ ಸ್ಥಳೀಯರಿಗೆ ಉದ್ಯೋಗ ಒದಗಿಸಲು ರಾಜ್ಯ ಸರ್ಕಾರ ಮಸೂದೆ ಸಿದ್ದಪಡಿಸಿದೆ. ಅದರಲ್ಲಿ ಸ್ಥಳೀಯರು ಅಥವಾ ಕನ್ನಡಿಗರು ಯಾರು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಆ ವ್ಯಾಖ್ಯಾನದ ಪ್ರಕಾರ ಸರ್ಕಾರದ ನಡೆ ಕಾನೂನುಬದ್ಧವೇ ಆಗಿದೆ’ ಎಂದರು.
ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ‘ಇಂದಿನ ಬಹುರಾಷ್ಟ್ರೀಯ ಕಂಪನಿಗಳು ‘ಆಧುನಿಕ ಅಗ್ರಹಾರ’ಗಳಂತೆ ಕಾಣುತ್ತವೆ. ಅವು ಸರ್ಕಾರದ ನೀತಿಗಳನ್ನು ನಿಯಂತ್ರಿಸುತ್ತಿವೆ’ ಎಂದರು.
‘ಕರ್ನಾಟಕ ಮತ್ತು ಶಿಕ್ಷಣ ವ್ಯವಸ್ಥೆ’ ಕುರಿತು ಮಾತನಾಡಿದ ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್, ‘ದೇಶದ ಶಿಕ್ಷಣ ವ್ಯವಸ್ಥೆಯು ಈಗ ಬಲಿಷ್ಠ ಸಮುದಾಯಗಳ ನಿಯಂತ್ರಣದಲ್ಲಿ ಇವೆ. ಪರಿಣಾಮವಾಗಿ ಶಿಕ್ಷಣ ಖಾಸಗೀಕರಣ ವ್ಯಾಪಕವಾಗುತ್ತಿದ್ದು, ಸರ್ಕಾರಿ ಶಾಲಾ–ಕಾಲೇಜುಗಳ ಸ್ಥಿತಿ ಬಿಗಡಾಯಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸ್ವಾತಂತ್ರ್ಯ ಬಂದಾಗ ದೇಶದಾದ್ಯಂತ ಒಟ್ಟು 19 ವಿಶ್ವವಿದ್ಯಾಲಯಗಳು ಇದ್ದವು. ಈಗ ವಿಶ್ವವಿದ್ಯಾಲಯಗಳ ಸಂಖ್ಯೆ 1,000ಕ್ಕೂ ಹೆಚ್ಚು. ಆದರೆ ಶಿಕ್ಷಣದ ಗುಣಮಟ್ಟ ಮಾತ್ರ ಏರಿಕೆಯಾಗಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಹಲವು ಮಜಲುಗಳಿವೆ. ಇಲ್ಲಿನ ಶಿಕ್ಷಣ ನೀತಿ ಎಂಬುದು ಸರ್ಕಾರದ ನೀತಿ ಆಗಿದೆಯೇ ಹೊರತು, ಜನರನ್ನು ಒಳಗೊಂಡು ರೂಪಿತವಾದ ಸಾರ್ವಜನಿಕ ನೀತಿಯಲ್ಲ. ಶಿಕ್ಷಣದ ಗುಣಮಟ್ಟ ಸುಧಾರಣೆಯ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ಅಧ್ಯಾಪಕರು ವೈಚಾರಿಕ ಚಿಂತನೆಗಳನ್ನು ರೂಪಿಸುವುದೇ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.