ಬೆಂಗಳೂರು: ಪದವಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಎಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಎಸ್.ಆರ್.ನಗರದ ನಿವಾಸಿ ಮುಕೇಶ್ವರನ್ (24) ಬಂಧಿತ.
‘ಹೊಸೂರು ಸರ್ವೀಸ್ ರಸ್ತೆಯ ಬಳಿ ಶನಿವಾರ ರಾತ್ರಿ 1ರಿಂದ 1.30ರ ಅವಧಿಯಲ್ಲಿ ಕೃತ್ಯ ಎಸಗಿದ್ದ ಆರೋಪಿ, ಆಡುಗೋಡಿಯ ಮನೆಯೊಂದರಲ್ಲಿ ಅವಿತಿದ್ದ. ಆರೋಪಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ತಮಿಳುನಾಡು ಮೂಲದ ಆರೋಪಿ ಚಿಕ್ಕ ವಯಸ್ಸಿನಲ್ಲೇ ನಗರಕ್ಕೆ ಬಂದು ಕುಟುಂಬದ ಸದಸ್ಯರ ಜತೆಗೆ ಇಲ್ಲಿಯೇ ನೆಲೆಸಿದ್ದ. ನಗರದ ಸಂಸ್ಥೆಯೊಂದರಲ್ಲಿ ನೃತ್ಯ ತರಬೇತಿ ಪಡೆದುಕೊಂಡಿದ್ದ. ಕೊರಿಯೊಗ್ರಫಿಯನ್ನು ವೃತ್ತಿ ಮಾಡಿಕೊಂಡಿದ್ದ. ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಸ್ಕೇಟಿಂಗ್ ಹಾಗೂ ನೃತ್ಯ ತರಬೇತಿ ಸಹ ನೀಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಹೊರವಲಯದಲ್ಲಿ ಇರುವ ಖಾಸಗಿ ಕಾಲೇಜಿನಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಓದುತ್ತಿದ್ದಾರೆ. ಶನಿವಾರ ಸಂಜೆ ಸ್ನೇಹಿತರ ಜತೆಗೆ ಪಾರ್ಟಿಗೆ ತೆರಳಿದ್ದರು. ತಡರಾತ್ರಿವರೆಗೂ ಕೋರಮಂಗಲ ಪಬ್‌ನಲ್ಲಿ ಸ್ನೇಹಿತರ ಜತೆಗೆ ಪಾರ್ಟಿ ಮಾಡಿದ್ದರು. ಬಳಿಕ ಸ್ನೇಹಿತರೊಂದಿಗೆ ಕಾರು ಚಾಲನೆ ಮಾಡಿಕೊಂಡು ಮನೆಗೆ ಹೋಗುವಾಗ ಮಾರ್ಗಮಧ್ಯೆ ಎರಡು ಆಟೊಗಳಿಗೆ ಕಾರು ಡಿಕ್ಕಿಯಾಗಿದೆ. ಅಲ್ಲಿ ಆಟೊ ಚಾಲಕರು ಹಾಗೂ ಯುವತಿಯ ಸ್ನೇಹಿತರ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಗಲಾಟೆಯ ಮಾಹಿತಿ ಪೊಲೀಸರಿಗೂ ಗೊತ್ತಾದ್ದರಿಂದ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಬಂದಿದ್ದರು. ಎಲ್ಲರನ್ನೂ ಪೊಲೀಸರು ಸಮಾಧಾನ ಪಡಿಸಿದ್ದರು’ ಎಂದು ಮೂಲಗಳು ಹೇಳಿವೆ.
‘ಬಳಿಕ ಸಂತ್ರಸ್ತ ಯುವತಿ ಕಾರು ಹಾಗೂ ಸ್ನೇಹಿತರನ್ನು ಅಲ್ಲೇ ಬಿಟ್ಟು ಆಟೊದಲ್ಲಿ ತೆರಳಿದ್ದರು. ಸ್ವಲ್ಪ ದೂರ ಪ್ರಯಾಣಿಸಿದ ಮೇಲೆ ಆಟೊ ಇಳಿದು ನಡೆದು ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನ ಬಳಿ ಡ್ರಾಪ್ ಕೇಳಿ, ಆತನೊಂದಿಗೆ ಹೊರಟಿದ್ದರು. ಆತ ಆಕೆಯನ್ನು ಬೇರೊಂದು ಮಾರ್ಗದಲ್ಲಿ ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ’ ಎಂದು ಮೂಲಗಳು ತಿಳಿಸಿವೆ.
‘ಯುವತಿ ತನ್ನ ಮೊಬೈಲ್‌ನಲ್ಲಿದ್ದ ಎಸ್‌ಒಎಸ್ ಬಟನ್ ಒತ್ತಿದ್ದರು. ಆಕೆಯ ತಂದೆ ಮತ್ತು ಸ್ನೇಹಿತರ ಮೊಬೈಲ್‌ಗೆ ತುರ್ತು ಸಂದೇಶ ಮತ್ತು ಲೋಕೇಶನ್ ಹೋಗಿತ್ತು. ಲೊಕೇಶನ್ ಆಧರಿಸಿ ಸ್ನೇಹಿತರು ಸ್ಥಳಕ್ಕೆ ಬಂದಾಗ ಗಿರಿಯಾಸ್ ಶೋರೂಮ್ ಹಿಂಭಾಗದ ಲಾರಿ ನಿಲ್ಲಿಸುವ ಜಾಗದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಸಂತ್ರಸ್ತೆ ಇದ್ದರು. ಆರೋಪಿ ಓಡಿಹೋಗಿದ್ದ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.