ADVERTISEMENT

ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯ: ಚಾಲೆಂಜ್‌ ಮೌಲ್ಯಮಾಪನಕ್ಕೆ ₹4 ಸಾವಿರ!

ಅಂತಿಮ ನಿರ್ಧಾರವಲ್ಲ, ಶುಲ್ಕದಲ್ಲಿ ಪರಿಷ್ಕರಣೆಯೂ ಸಾಧ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:33 IST
Last Updated 29 ಸೆಪ್ಟೆಂಬರ್ 2019, 19:33 IST
   

ಬೆಂಗಳೂರು: ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯ ಜಾರಿಗೊಳಿಸಿರುವ ‘ಸವಾಲಿನ ಮೌಲ್ಯಮಾಪನ‘ಕ್ಕೆ (ಚಾಲೆಂಜ್‌ ವ್ಯಾಲ್ಯೂವೇಷನ್‌) ದುಬಾರಿ ಶುಲ್ಕ ನಿಗದಿಪಡಿಸಿರುವುದಕ್ಕೆ ವಿದ್ಯಾರ್ಥಿಗಳಿಂದತೀವ್ರ ಆಕ್ಷೇಪ ಕೇಳಿಬಂದಿದೆ.

ಪ್ರತಿಯೊಂದು ಉತ್ತರ ಪತ್ರಿಕೆಗೆ ₹4 ಸಾವಿರ ನಿಗದಿಪಡಿಸಲಾಗಿದ್ದು, ಇಷ್ಟೊಂದು ದುಬಾರಿ ಶುಲ್ಕ ಏಕೆ ಎಂದು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಇದೇ7ರಂದು ಸುತ್ತೋಲೆ ಹೊರ ಡಿಸಿದ್ದ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಮರುಮೌಲ್ಯ ಮಾಪನ ಪದ್ಧತಿರದ್ದುಪಡಿಸಿ ಚಾಲೆಂಜ್‌ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿತ್ತು.

ADVERTISEMENT

‘ಚಾಲೆಂಜ್‌ ಮೌಲ್ಯಮಾಪನಕ್ಕೆ ಅರ್ಜಿ ಹಾಕುವವರ ಪ್ರಮಾಣ ಶೇ 2ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ಹಲವರಿಗೆ ಹೊರೆಯಾಗುತ್ತದೆ ಎಂದು ಹೇಳಲಾಗದು. ಉತ್ತರ ಪತ್ರಿಕೆಯ ಸ್ಕ್ಯಾನ್‌, ಹೊರಗಿನಿಂದ ಬರುವ ಮೌಲ್ಯಮಾಪಕರ ಭತ್ಯೆ ಅಧಿಕ ಇರುವುದರಿಂದ ಈ ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಕುಲಪತಿ ಪ್ರೊ.ಸಿ. ಜಾಫೆಟ್‌ ಹೇಳಿದರು.

‘ಮೈಸೂರು, ಮಂಗಳೂರು, ಶಿವಮೊಗ್ಗ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ವಿಧಿಸುವ ಶುಲ್ಕಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಲ್ಲೆಲ್ಲ ₹ 3,800, ₹ 3,000, ₹2,800ರಂತೆ ಶುಲ್ಕ ವಿಧಿಸಿದ್ದನ್ನು ಗಮನಿಸಲಾಗಿದೆ. ಬೆಂಗಳೂರಿನಲ್ಲಿ ಭತ್ಯೆ ಪ್ರಮಾಣ ಅಧಿಕ ಇರುವುದರಿಂದ ಈ ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಮೌಲ್ಯಮಾಪನ ಕುಲಸಚಿವ ಡಾ.ಚಂದ್ರಪ್ಪ ತಿಳಿಸಿದರು.

‘ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಜಾರಿಗೆ ಬಂದಿದೆ.ಇದೇನು ಅಂತಿಮ ತೀರ್ಮಾನವಲ್ಲ, ಆಕ್ಷೇಪಣೆಗಳು ಬಂದರೆ ಶೈಕ್ಷಣಿಕ ಮಂಡಳಿ, ಸಿಂಡಿಕೇಟ್‌ ಗಮನಕ್ಕೆ ತರಲಾಗುವುದು‘ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.