ADVERTISEMENT

ಸೊರಗುತ್ತಿದೆ ಬೆಂಗಳೂರು ಕೇಂದ್ರ ವಿ.ವಿ

ನಗರದ ಹೃದಯ ಭಾಗದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಬಲ ನೀಡದ ಸಮ್ಮಿಶ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 19:34 IST
Last Updated 24 ಡಿಸೆಂಬರ್ 2018, 19:34 IST
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ   

ಬೆಂಗಳೂರು: ಇದು ಬೆಂಗಳೂರು ‘ಹೃದಯ’ ಭಾಗದಲ್ಲಿರುವ ವಿಶ್ವವಿದ್ಯಾಲಯ. ಆದರೆ, ಇದಕ್ಕಿರುವ ಕಾಯಂ ಸಿಬ್ಬಂದಿ ಕೇವಲ ಮೂರು ಮಂದಿ.ಕರೆಂಟ್‌ ಬಿಲ್‌, ನೀರಿನ ಬಿಲ್‌ ಪಾವತಿಯೂ ಕಷ್ಟ ಎಂಬ ಸ್ಥಿತಿ ಇದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಈವರೆಗೂ ಒಂದು ಪೈಸೆಯೂ ತಲುಪಿಲ್ಲ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉನ್ನತ ಶಿಕ್ಷಣಕ್ಕೆ ಮಹತ್ವ ಸಿಗುತ್ತಿಲ್ಲ ಎಂಬ ಕೂಗಿಗೆ,ಈಗಷ್ಟೇ ಕಣ್ಣು ಬಿಡುತ್ತಿರುವ ‘ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ’ವೇ ಒಂದು ಸ್ಪಷ್ಟ ನಿದರ್ಶನ.

ಜಾಗತಿಕ ಮಟ್ಟದ ವಿಶ್ವವಿದ್ಯಾಲಯವಾಗಿ ರೂಪಿಸಬೇಕು ಎಂಬ ಕನಸು ಕಟ್ಟಿಕೊಂಡು ಕುಳಿತಿರುವ ಕುಲಪತಿ ಪ್ರೊ. ಎಸ್‌.ಜಾಫೆಟ್‌ ಅವರ ಯಾವುದೇ ಒಂದು ಯೋಜನೆಯೂ ಕೈಗೂಡುವ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ.

ADVERTISEMENT

ಭೌತವಿಜ್ಞಾನ, ಜೀವವಿಜ್ಞಾನಗಳ ವಿಭಾಗವನ್ನು ಹೊಸದಾಗಿ ಸ್ಥಾಪಿಸಬೇಕು. ವಿಜ್ಞಾನದ ವಿಭಾಗಗಳಿಗೆ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು. ಅಚ್ಚರಿ ಎಂದರೆ ಇವೆಲ್ಲದರ ಆರಂಭಕ್ಕೆ ವಿಶ್ವವಿದ್ಯಾಲಯದ ಬಳಿ ಬಿಡಿಗಾಸೂ ಇಲ್ಲ.

ಒಂದು ವರ್ಷದ ಹಿಂದಷ್ಟೇ ‘ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ’ ಅಸ್ತಿತ್ವಕ್ಕೆ ಬಂದಿತು. ಮೂರು ವಿಶ್ವವಿದ್ಯಾಲಯಗಳ ಮಧ್ಯೆ ‘ಆಸ್ತಿ’ ಹಂಚಿಕೆ ಆದ ನಂತರ ಕೆಲವೊಂದು ಕಟ್ಟಡಗಳು ವ್ಯಾಪ್ತಿಗೆ ಇನ್ನೂ ಹಸ್ತಾಂತರವಾಗಿಲ್ಲ. ಕುಲಪತಿ, ಕುಲಸಚಿವ ಮತ್ತು ಕುಲಸಚಿವ ಮೌಲ್ಯಮಾಪನ ಈ ಮೂರು ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಉಳಿದಂತೆ ಅತಿಥಿ ಉಪನ್ಯಾಸಕರಿಂದಲೇ ‘ಶೋ’ ನಡೆಯುತ್ತಿದೆ.

ಹಿಂದಿನ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿಶ್ವವಿದ್ಯಾಲಯಗಳಾಗಿ ವಿಭಜಿಸಿದಾಗ, ಕೇಂದ್ರ ವಿಶ್ವವಿದ್ಯಾಲಯಕ್ಕೆ ₹5 ಕೋಟಿ ನಿಗದಿ ಮಾಡಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯ ₹ 10 ಕೋಟಿ ನೀಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಕೊನೆಯ ಬಜೆಟ್‌ನಲ್ಲಿ ₹17.50 ಕೋಟಿ ಅನುದಾನ ಘೋಷಿಸಿದ್ದರು. ಬಳಿಕ ಆ ಮೊತ್ತವನ್ನು ಬಿಡುಗಡೆ ಮಾಡಲು ಆದೇಶವೂ ಆಗಿತ್ತು. ಈ ಹಣ ಮೂರು ಕಂತುಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಇಲ್ಲಿಯವರೆಗೆ ಒಂದು ಪೈಸೆಯೂ ಬಿಡುಗಡೆ ಆಗಿಲ್ಲ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ‘ಬಾಲಗ್ರಹ’ ಸಮಸ್ಯೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಕುಲಪತಿ ಎಸ್.ಜಾಫೆಟ್‌, ‘ರಾಜ್ಯ ಸರ್ಕಾರದಿಂದ ₹17.50 ಕೋಟಿ ಹಣ ಬಂದಿದ್ದರೆ, ಶತಮಾನಕ್ಕೂ ಹಳೆಯದಾದ ಸೆಂಟ್ರಲ್‌ ಕಾಲೇಜಿನ ಪಾರಂಪರಿಕ ಕಟ್ಟಡಗಳ ನವೀಕರಣ ಮತ್ತು ಹೊಸ ವಿಭಾಗಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂಬ ಉದ್ದೇಶವಿತ್ತು. ಹಣ ಸಿಗದೇ ಯಾವ ಕಾರ್ಯವನ್ನೂ ಆರಂಭಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾರ್ಗಸೂಚಿ ಅನ್ವಯವೇ 26 ವಿಭಾಗಗಳಿಗೆ 194 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಬೇಡಿಕೆ ಇಟ್ಟಿದ್ದೇವೆ. ಸದ್ಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಕೆಲವು ಅಧ್ಯಾಪಕರು ಇಲ್ಲಿಗೆ ಬಂದು ಬೋಧಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ. ವಿಶ್ವವಿದ್ಯಾಲಯ ಸೃಷ್ಟಿಸುವಾಗ ಬೋಧಕ ಮತ್ತು ಬೋಧಕೇತರ ಹುದ್ದೆಗಳ ವರ್ಗಾವಣೆಯೂ ಸರಿಯಾಗಿ ಆಗಲಿಲ್ಲ. 18 ವಿಭಾಗಗಳಲ್ಲಿ 17 ವಿಭಾಗಗಳು ಬೆಂಗಳೂರು ವಿಶ್ವವಿದ್ಯಾಲಯದ ಬಳಿಯೇ ಉಳಿದವು. ವಿದೇಶಿ ಭಾಷಾ ಕಲಿಕೆ ವಿಭಾಗ ನಮ್ಮಲ್ಲಿ ಉಳಿಯಿತು’ ಎಂದು ಅವರು ಹೇಳಿದರು.

‘ಸೆಂಟ್ರಲ್‌ ಕಾಲೇಜಿನ ಕಲ್ಲು ಕಟ್ಟಡವನ್ನು ಇನ್ನೂ ನಮ್ಮ ಸುಪರ್ದಿಗೆ ಬಿಟ್ಟುಕೊಟ್ಟಿಲ್ಲ. 17 ಬೋಧಕರು ಕೇಂದ್ರ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಬಯಸಿ ಪತ್ರ ನೀಡಿದ್ದಾರೆ. ಆದರೆ, ಇವರ ವರ್ಗಾವಣೆ ಆದೇಶ ರಾಜ್ಯಪಾಲರ ಬಳಿಯೇ ಉಳಿದಿದೆ’ ಎಂದು ಜಾಫೆಟ್‌ ತಿಳಿಸಿದರು.

‘ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ₹100 ಕೋಟಿಯನ್ನು ಒಂದು ಬಾರಿಯ ಅನುದಾನವಾಗಿ ನೀಡಿದರೆ, ಸಾಕಷ್ಟು ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲು ಸಾಧ್ಯವಿದೆ. ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಮನವಿ ಮಾಡಿದರು.

*****

ಮೂರು ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆರಂಭದಲ್ಲಿ ಇಂತಹ ಸಮಸ್ಯೆಗಳು ಇದ್ದೇ ಇರುತ್ತವೆ.

– ಪ್ರೊ. ಎಸ್‌.ಜಾಫೆಟ್‌, ಕುಲಪತಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.