ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಿ ‘ಓಮೈಕ್ರಾನ್’ ಸೋಂಕು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಓಮೈಕ್ರಾನ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ‘ರಾತ್ರಿ ಕರ್ಫ್ಯೂ’ವನ್ನು ಮತ್ತೆ ಜಾರಿಗೊಳಿಸಿದೆ. ‘ರಾತ್ರಿ ಕರ್ಫ್ಯೂ’ ನಿಜಕ್ಕೂ ಅನಿವಾರ್ಯ ಇತ್ತೇ, ಸೋಂಕು ಹರಡುವಿಕೆಗೆ ತಡೆಗಟ್ಟಲು ಇದು ನೆರವಿಗೆ ಬರುತ್ತದೆಯೇ, ಇದರಿಂದ ಜನಜೀವನದ ಮೇಲೆ ಉಂಟಾಗಲಿರುವ ಪರಿಣಾಮಗಳೇನು ಎಂಬ ಬಗ್ಗೆ ವಿಭಿನ್ನ ಕ್ಷೇತ್ರಗಳ ಮೂವರು ಇಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸೋಂಕು ನಿಯಂತ್ರಿಸುವಲ್ಲಿ ರಾತ್ರಿ ಕರ್ಫ್ಯೂ ನೆರವಾಗುವುದು ನಿಜ ಎಂಬುದು ತಜ್ಞರ ಅಭಿಪ್ರಾಯ. ಇದನ್ನು ಜಾರಿಗೊಳಿಸುವ ನೆಪದಲ್ಲಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಕಿರುಕುಳ ನೀಡಬಾರದು ಎಂಬುದು ಜಿಲ್ಲೆಯ ಮದ್ಯ ವ್ಯಾಪಾರಿಗಳ ಸಂಘದ ಕೋರಿಕೆ.
‘ರೆಸ್ಟೋರೆಂಟ್‌ಗಳಿಗೆ ಹೆಚ್ಚಲಿದೆ ಕಿರುಕುಳ’
ರಾತ್ರಿ ಕರ್ಫ್ಯೂ ಜಾರಿಗೊಳಿಸುವುದರಿಂದ ಓಮೈಕ್ರಾನ್ ಸೋಂಕು ಹರಡುವಿಕೆ ನಿಯಂತ್ರಿಸಬಹುದು ಎಂಬುದು ಮೂರ್ಖತನ. ಇದರ ಅಗತ್ಯವೇ ಇರಲಿಲ್ಲ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಜನ ಹೆಚ್ಚು ಗುಂಪುಗೂಡುವುದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರ ಪ್ರದೇಶಗಳಲ್ಲಿ. ಅದನ್ನಷ್ಟೇ ತಡೆಯುವ ಬದಲು ಎಲ್ಲ ಕಡೆಯೂ ಕರ್ಫ್ಯೂ ಜಾರಿಗೊಳಿಸಿದರೆ ವರ್ತಕರಿಗೆ, ರೆಸ್ಟೋರೆಂಟ್‌ಗಳ ಮಾಲೀಕರಿಗೆ ಭಾರಿ ನಷ್ಟ ಉಂಟಾಗುತ್ತದೆ.
ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಯಾಗಲು ಅವಕಾಶ ಮುಂದುವರಿಸಲಾಗಿದೆ. ಮಾಲ್‌ಗಳಿಗೂ ಹೆಚ್ಚಿನ ನಿರ್ಬಂಧ ಇಲ್ಲ. ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಹಾಗೂ ಹೋಟೆಲ್‌ಗಳು ಶೇ 50ರಷ್ಟು ಆಸನಗಳನ್ನಷ್ಟೇ ಬಳಸಬಹುದು ಎಂದು ನಿರ್ಬಂಧಿಸಲಾಗಿದೆ. ಇದರ ಹಿಂದಿನ ತರ್ಕ ಯಾವುದು ಎಂದು ಅರ್ಥವಾಗುತ್ತಿಲ್ಲ.
ಕೋವಿಡ್ ಬಿಕ್ಕಟ್ಟಿನಿಂದಾಗಿ ತತ್ತರಿಸಿದ್ದೇವೆ. ಮನಬಂದಂತೆ ನಿರ್ಬಂಧ ಹೇರುತ್ತಿರುವ ಸರ್ಕಾರ ಅದರಿಂದಾಗುವ ನಷ್ಟ ಪರಿಹಾರ ತುಂಬಿಕೊಡುವುದಿಲ್ಲ. ಕಳೆದ ವರ್ಷ 50 ದಿನಗಳಿಗೂ ಹೆಚ್ಚು ದಿನ ರೆಸ್ಟೋರೆಂಟ್‌ಗಳನ್ನು ತೆರೆಯುವುದಕ್ಕೇ ಸರ್ಕಾರ ಅವಕಾಶ ನೀಡಲಿಲ್ಲ. ಪರವಾನಗಿ ಶುಲ್ಕವನ್ನು ಈ ಎರಡು ತಿಂಗಳು ಮಾಫಿ ಮಾಡಿ ಎಂಬ ಬೇಡಿಕೆಗೂ ಸ್ಪಂದಿಸಿಲ್ಲ. ರಾತ್ರಿ 10 ಗಂಟೆಗೆ ರೆಸ್ಟೋರೆಂಟ್‌ಗಳನ್ನು ಮುಚ್ಚಿದರೆ ವ್ಯಾಪಾರಕ್ಕೆ ಮತ್ತೆ ಹೊಡೆತ ಬೀಳುತ್ತದೆ. ಅದಕ್ಕಿಂತಲೂ ಪೊಲೀಸರಿಂದ ಆಗುವ ಕಿರುಕುಳ ಮತ್ತಷ್ಟು ಹೆಚ್ಚಲಿದೆ.
ಲೋಕೇಶ್, ಬೆಂಗಳೂರು ನಗರ ಜಿಲ್ಲೆಯ, ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ
***
‘ರಾಜಕೀಯ ರ‍್ಯಾಲಿಗೆ ನಿರ್ಬಂಧ ಏಕಿಲ್ಲ’
ಬೆಳಿಗ್ಗೆ ಹೊತ್ತು ಜನ ಗುಂಪುಗೂಡುವಿಕೆ ನಿಯಂತ್ರಿಸುವುದು ಸುಲಭ. ಆದರೆ, ರಾತ್ರಿ ಹೊತ್ತು ಇದನ್ನು ನಿಯಂತ್ರಿಸುವುದು ಬಲು ಕಷ್ಟ. ಹಾಗಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಕ್ರಮ ತಪ್ಪಲ್ಲ. ಸಮಸ್ಯೆ ಅದಲ್ಲ, ರಾಜಕೀಯ ರ‍್ಯಾಲಿಗಳಿಗೆ, ರಾಜಕೀಯ ಪಕ್ಷಗಳ ಚಟುವಟಿಕೆಗಳಿಗೆ ಇಂತಹ ಯಾವುದೇ ನಿರ್ಬಂಧವೂ ಅನ್ವಯವಾಗುತ್ತಿಲ್ಲ. ಇವುಗಳ ಮೇಲೆ ನಿಗಾ ಇಡಲು ಆಡಳಿತ ಯಂತ್ರಕ್ಕೂ ಆಸಕ್ತಿ ಇಲ್ಲ. ರಾಜಕೀಯ ಮುಖಂಡರು ಜನರಿಗೆ ಮಾದರಿಯಾಗಿರಬೇಕು. ಸೋಂಕು ನಿಯಂತ್ರಣಾ ಕ್ರಮಗಳ ಮಹತ್ವ ಸಾರುವ ವಿಚಾರದಲ್ಲಿ ಮೇಲ್ಪಂಕ್ತಿ ಹಾಕಿಕೊಡಬೇಕು. ಆದರೆ ಅವರು ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಅಧಿಕಾರಿಗಳು, ಮಾರ್ಷಲ್‌ಗಳು ಕೇವಲ ಮಾಸ್ಕ್ ಕಡ್ಡಾಯಗೊಳಿಸುವುದರ ಹಿಂದೆ ಬಿದ್ದಿದ್ದಾರೆ. ಮಾಸ್ಕ್ ಹಾಕಿಕೊಳ್ಳುವುದರ ಜೊತೆಗೆ ಪರಸ್ಪರ ಅಂತರ ಕಾಪಾಡುವುದೂ ಅಷ್ಟೇ ಮುಖ್ಯ. ಕಚೇರಿಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ, ಮಾರುಕಟ್ಟೆಗಳಲ್ಲಿ, ಮಾಲ್‌ಗಳಲ್ಲಿ ಸಾರ್ವಜನಿಕ ಸಾರಿಗೆ ಮುಂತಾದೆಡೆಗಳೆಲ್ಲೆಲ್ಲಾ ಅಂತರ ಕಾಪಾಡುವಿಕೆಯನ್ನು ಕಡೆಗಣಿಸಲಾಗುತ್ತಿದೆ. ಇದು ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಪ್ರಭಾ ದೇವ್, ‘ಹೆರಿಟೇಜ್ ಬೇಕು’ ಸಂಘಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.