ಬೆಂಗಳೂರು: ‘ಕೆಲವು ಮಕ್ಕಳಿಗೆ ಓದಿದ ವಿಷಯ ಮರೆತು ಹೋಗುತ್ತದೆ. ಹಾಗಂತ ಅವರನ್ನು ದಡ್ಡರೆಂದು ಪರಿಗಣಿಸದೆ, ಆತ್ಮವಿಶ್ವಾಸ ತುಂಬಬೇಕು’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಬೆಂಗಳೂರು ನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲಾ ಕಚೇರಿ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಮಕ್ಕಳಲ್ಲಿ ಗುರಿ ಸಾಧಿಸುವ ಹಠ, ಛಲವನ್ನು ಹುಟ್ಟುಹಾಕಬೇಕು. ಬಿಹಾರ, ಉತ್ತರ ಪ್ರದೇಶದವರಿಗೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಇರುತ್ತದೆ. ಆದ್ದರಿಂದ ಅಲ್ಲಿಯವರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಅಧಿಕಾರಿಗಳಾಗಿ ಹೊರಹೊಮ್ಮುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೆ. ಸಾಮಾಜಿಕ, ಆರ್ಥಿಕವಾಗಿಯೂ ಸಮಸ್ಯೆ ಎದುರಿಸುತ್ತಾ ಇರುತ್ತಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು’ ಎಂದು ತಿಳಿಸಿದರು.
‘ಖಾಸಗಿ ಶಾಲೆಯವರು ನದಿ ಹರಿಯುವ ದಿಕ್ಕಿನಲ್ಲಿ ಈಜಿಕೊಂಡು ಸಾಗಿದರೆ, ಸರ್ಕಾರಿ ಶಾಲೆಯವರು ವಿರುದ್ಧ ದಿಕ್ಕಿನಲ್ಲಿ ಈಜಬೇಕಾಗುತ್ತದೆ. ಇದರಿಂದ ಗುರಿ ತಲುಪುವುದು ಕಷ್ಟ’ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಲತಾ ಕುಮಾರಿ ಮಾತನಾಡಿ, ‘ಸಾಮಾನ್ಯವಾಗಿ ಶಿಕ್ಷಕರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಆರೋಗ್ಯಯುತ ಸಮಾಜ ನಿರ್ಮಿಸಲು ಶಿಕ್ಷಕರು ಆರೋಗ್ಯದಿಂದ ಇರಬೇಕು. ಶಾಲೆಗೆ ಬಂದ ಮಕ್ಕಳು ಬಾಲ ಕಾರ್ಮಿಕ ಹಾಗೂ ಬಾಲ್ಯ ವಿವಾಹ ಪದ್ಧತಿಗೆ ಒಳಗಾಗದಂತೆ ನೋಡಿಕೊಳ್ಳಬೇಕು. ಶಿಕ್ಷಕರಲ್ಲಿ ಬದ್ಧತೆ ಇರಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.