ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 16ನೇ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ಮೊದಲ ವಾರ ನಡೆಸಲು ನಿರ್ಧರಿಸಿದೆ. ನಗರದಲ್ಲಿ ಕನ್ನಡ ಭಾಷೆಯ ಸ್ಥಿತಿಗತಿಯ ಬಗ್ಗೆ ಈ ಸಮ್ಮೇಳನ ಕೇಂದ್ರೀಕೃತವಾಗಲಿದೆ.
15ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021ರ ಮಾರ್ಚ್ ತಿಂಗಳು ಹೆಬ್ಬಾಳದಲ್ಲಿ ನಡೆಸಲಾಗಿತ್ತು. ಸಮ್ಮೇಳನದ ಅಧ್ಯಕ್ಷರಾಗಿದ್ದ ಸಾಹಿತಿ ಸಿ. ವೀರಣ್ಣ, ತಮ್ಮ ಭಾಷಣದಲ್ಲಿ ಗಡಿ ವಿವಾದದ ಬಗ್ಗೆ ಪ್ರಸ್ತಾಪಿಸಿದ್ದರು. ವರ್ಷಕ್ಕೊಮ್ಮೆ ನಡೆಯ ಬೇಕಿದ್ದ ಈ ಸಮ್ಮೇಳನ ಕೋವಿಡ್ ಕಾರಣ ಕಳೆದ ವರ್ಷ ನಡೆದಿರಲಿಲ್ಲ. ಈಗ 16ನೇ ಸಮ್ಮೇಳನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನಾಧ್ಯಕ್ಷರಾಗಿ ಲೇಖಕಿ ಎಚ್.ಎಸ್. ಶ್ರೀಮತಿ ಆಯ್ಕೆಯಾಗಿದ್ದಾರೆ.
ಕೋವಿಡ್ ಕಾರಣ ಕಳೆದ ಬಾರಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಮೊಟಕುಗೊಳಿಸಲಾಗಿತ್ತು. ಹೆಚ್ಚು ಜನರಿಗೆ ಆಹ್ವಾನವನ್ನೂ ನೀಡಿರಲಿಲ್ಲ. ಒಂದು ವರ್ಷದ ಬಳಿಕ ನಡೆಯುತ್ತಿರುವ ಈ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಪರಿಷತ್ತಿನ ನಗರ ಜಿಲ್ಲಾ ಘಟಕ ನಿರ್ಧರಿಸಿದೆ. ಈ ಘಟಕಕ್ಕೆ ಎಂ. ಪ್ರಕಾಶಮೂರ್ತಿ ಅವರು ಅಧ್ಯಕ್ಷರಾದ ಬಳಿಕ ನಡೆಯು
ತ್ತಿರುವ ಪ್ರಥಮ ಸಮ್ಮೇಳನವೂ ಇದಾಗಿದೆ. ಈಶಾನ್ಯ ಭಾಗದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಮ್ಮೇಳನ ನಡೆಯುವ ಸಾಧ್ಯತೆಯಿದೆ.
8 ಗೋಷ್ಠಿಗಳು: ಎರಡು ದಿನ ನಡೆಯುವ ಸಮ್ಮೇಳನದಲ್ಲಿ 8 ಗೋಷ್ಠಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಕನ್ನಡದ ವಾತಾವರಣ, ವಲಸಿಗರಿಗೆ ಕನ್ನಡ ಕಲಿಕೆ, ನಗರದ ಕನ್ನಡ ಶಾಲೆಗಳ ಸ್ಥಿತಿಗತಿ, ಕನ್ನಡ ಭಾಷೆಯಲ್ಲಿ ಕಲಿಕೆ ಬಗ್ಗೆಯೂ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗ ಸಬಲೀಕರಣ ಸೇರಿ ವಿವಿಧ ವಿಷಯಗಳ ಮೇಲೆಯೂ ಗೋಷ್ಠಿ ಗಳನ್ನು ನಡೆಸುವ ಬಗ್ಗೆ ವಿಷಯ ಆಯ್ಕೆ ಸಮಿತಿ ಸಲಹೆ ನೀಡಿದೆ.
‘ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲಾಗುವುದು. ‘ರಾಜ್ಯ ರಾಜಧಾನಿ ಯಲ್ಲಿ ಕನ್ನಡ ಉಳಿದರೆ, ಇಡೀ ರಾಜ್ಯದಲ್ಲಿ ಕನ್ನಡ ಉಳಿದೀತು’ ಎನ್ನುವ ಧ್ಯೇಯವಾಕ್ಯಕ್ಕೆ ಪೂರಕ ವಾದ ಗೋಷ್ಠಿಗಳು ನಡೆಯ ಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು. ಲಾಂಛನ ವಿನ್ಯಾಸ ಸೇರಿ ವಿವಿಧ ಪ್ರಕ್ರಿಯೆ ಗಳು ನಡೆಯುತ್ತಿವೆ’ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ತಿಳಿಸಿದರು.
ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣ
ಜಿಲ್ಲಾ ಸಮ್ಮೇಳನಗಳಿಗೆ ಸರ್ಕಾರದಿಂದ ₹ 5 ಲಕ್ಷ ಅನುದಾನ ನೀಡಲಾಗುತ್ತಿದೆ. ಸಭಾಂಗಣಗಳ ಬಾಡಿಗೆ ಏರಿಕೆ ಸೇರಿ ವಿವಿಧ ವೆಚ್ಚ ಹೆಚ್ಚಳದಿಂದ ಇಷ್ಟು ಮೊತ್ತದಲ್ಲಿ ಎರಡು ದಿನಗಳ ಸಮ್ಮೇಳನ ನಡೆಸುವುದು ಜಿಲ್ಲಾ ಘಟಕಗಳಿಗೆ ಸವಾಲಾಗಿದೆ. ಆದ್ದರಿಂದ ಬೆಂಗಳೂರು ನಗರ ಜಿಲ್ಲಾ ಘಟಕವು ದಾನಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ನೆರವಿನಿಂದ ಅನುದಾನ ಕ್ರೋಢೀಕರಿಸಿ, ಸಮ್ಮೇಳನ ನಡೆಸಲು ನಿರ್ಧರಿಸಿದೆ.
‘₹ 5 ಲಕ್ಷ ಅನುದಾನದಲ್ಲಿ ಸಮ್ಮೇಳನ ನಡೆಸಲು ಸಾಧ್ಯವಿಲ್ಲ. ಕಸಾಪ ಕೇಂದ್ರ ಘಟಕದ ಅಧ್ಯಕ್ಷರು ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದರು. ಆ ಅನುದಾನ ಬಂದರೆ ಸಮ್ಮೇಳನದ ಕೆಲಸಕ್ಕೆ ಸಹಕಾರಿ ಆಗಲಿದೆ. ದಾನಿಗಳು ಹಾಗೂ ಸಂಘ–ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ’ ಎಂದು ಎಂ. ಪ್ರಕಾಶಮೂರ್ತಿ ಹೇಳಿದರು.
***
ಈಶಾನ್ಯ ಬೆಂಗಳೂರಿನಲ್ಲಿ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಸ್ಥಳ, ದಿನಾಂಕ ಘೋಷಿಸಲಾಗುವುದು.
– ಎಂ. ಪ್ರಕಾಶಮೂರ್ತಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.