ADVERTISEMENT

ಗವಿಗಂಗಾಧರೇಶ್ವಸ್ವಾಮಿ ದೇಗುಲದಲ್ಲಿ ಸೂರ್ಯರಶ್ಮಿ ಅಗೋಚರ! ಭಕ್ತರಿಗೆ ತೀವ್ರ ನಿರಾಸೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 4:51 IST
Last Updated 15 ಜನವರಿ 2021, 4:51 IST
ಗವಿಗಂಗಾಧರೇಶ್ವಸ್ವಾಮಿ ದೇಗುಲ
ಗವಿಗಂಗಾಧರೇಶ್ವಸ್ವಾಮಿ ದೇಗುಲ   

ಬೆಂಗಳೂರು: ಪ್ರತಿವರ್ಷ ಮಕರ ಸಂಕ್ರಾಂತಿಯ ದಿನ ತನ್ನ ಪಥ ಬದಲಿಸುವ ಮುನ್ನ ಸೂರ್ಯನ ರಶ್ಮಿ ಗವಿಪುರದಲ್ಲಿನ ಗವಿಗಂಗಾಧರೇಶ್ವಸ್ವಾಮಿ ದೇಗುಲದ ಶಿವಲಿಂಗವನ್ನು ಸ್ಪರ್ಶಿಸುವುದು ಪ್ರತೀತಿ. ಆದರೆ, ಈ ವರ್ಷ ಶಿವನಿಗೆ ಸೂರ್ಯ ನಮಸ್ಕಾರ ಮಾಡಲು ಮೇಘ ಅಡ್ಡಿಯಾದ ಪ್ರಸಂಗ ನಡೆಯಿತು.

‌ಸೂರ್ಯರಶ್ಮಿಯ ಸಂಭ್ರಮಕ್ಕೆ ಹಲವು ದಿನಗಳಿಂದ ಸಿದ್ಧತೆಗಳು ನಡೆದಿತ್ತು.ಶಿವಲಿಂಗಕ್ಕೆ ಪೂಜಾ ಕೈಂಕರ್ಯಗಳು ನಡೆದಿದ್ದವು. ಬೆಳಿಗ್ಗೆಯಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಕಾತರದಿಂದ ಕಾದು ಕುಳಿತಿದ್ದರು.

ಸಂಜೆ 5.14ರಿಂದ 5.17ರ ಅವಧಿಯಲ್ಲಿ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಶಿವಲಿಂಗದ ಎದುರಿನ ನಂದಿಯ ಮೂಲಕ ಹಾದು ಹೋದ ಸೂರ್ಯನ ಕಿರಣ, ಗರ್ಭಗುಡಿಯ ತನಕ ಹೋಯಿತು. ಇನ್ನೇನು ಶಿವಲಿಂಗಕ್ಕೆ ಸ್ಪರ್ಶಿಸುವ ಹೊತ್ತಿಗೆ ಸೂರ್ಯನಿಗೆ ಮೋಡ ಕವಿದ ಕಾರಣ ಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶವಾಗುವುದು ಯಾರಿಗೂ ಗೋಚರವಾಗಲಿಲ್ಲ.

ADVERTISEMENT
ಸೂರ್ಯರಶ್ಮಿ ಶಿವಲಿಂಗದ ಮೇಲೆ ಬೀಳಬೇಕಿದ್ದ ಸಮಯದಲ್ಲಿ ಹಾಲಿನ ಅಭಿಷೇಕ ನೆರವೇರಿಸಲಾಯಿತು –ಪ್ರಜಾವಾಣಿ ಚಿತ್ರಗಳು

ಸೂರ್ಯನ ರಶ್ಮಿ ಬಿದ್ದಾಗ ಶಿವಲಿಂಗ ಬಂಗಾರದ ಬಣ್ಣದಲ್ಲಿ ಹೊಳೆಯುವ ಕೌತುಕದ ಕ್ಷಣಕ್ಕಾಗಿ ಕಾದು ಕುಳಿತಿದ್ದ ಭಕ್ತರಲ್ಲಿ ಇದರಿಂದ ನಿರಾಸೆ ಉಂಟಾಯಿತು. ಆದರೂ ಸಮಯಕ್ಕೆ ಸರಿಯಾಗಿ ಹಾಲಿನ ಹಾಗೂ ಇತರ ಅಭಿಷೇಕಗಳನ್ನು ಲಿಂಗಕ್ಕೆ ಮಾಡಲಾಯಿತು. ಬಳಿಕ ಭಕ್ತರು ಗಂಗಾಧರೇಶ್ವರನ ದರ್ಶನ ಪಡೆದರು.

‘ಗಂಗರ ಆಡಳಿತದ ಕಾಲದಲ್ಲಿ ನಿರ್ಮಾಣಗೊಂಡ ಗವಿಗಂಗಾಧರೇಶ್ವರ ದೇವಾಲಯ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಪುನರುಜ್ಜೀವನಗೊಂಡಿದೆ. ಭಾರತೀಯರುವಾಸ್ತುಶಿಲ್ಪದ ವಿಷಯದಲ್ಲಿ ಯಾವಾಗಲೂ ಮುಂದೆ ಇದ್ದರು ಎಂಬುದ‌ಕ್ಕೆ ಈ ದೇಗುಲ ಸಾಕ್ಷಿ. ಶಿವನಿಗೆ ನಮಸ್ಕಾರ ಮಾಡಿ ಸೂರ್ಯ ಉತ್ತರಾಯಣ ಪ್ರಯಾಣ ಆರಂಭಿಸುತ್ತಾನೆ ಎಂಬುದು ಜನರ ನಂಬಿಕೆ. ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳದೆ ಪಥ ಬದಲಿಸಿರುವ ಉದಾಹರಣೆ ಇರಲಿಲ್ಲ. ಆದರೆ, ಪ್ರಕೃತಿ ಇದೇ ಮೊದಲ ಬಾರಿಗೆ ಅಡ್ಡಿಯುಂಟು ಮಾಡಿದೆ’ ಎಂದು ನೆರೆದಿದ್ದ ಭಕ್ತರು ಬೇಸರ ವ್ಯಕ್ತಪಡಿಸಿದರು.

‘ಅಗೋಚರ ಹಿಂಸೆ ಇರಬಹುದು’

‘53 ವರ್ಷಗಳ ಗವಿಗಂಗಾಧರೇಶ್ವನ ಸೇವೆಯಲ್ಲಿ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳದೆ ಹೋದ ಉದಾಹರಣೆ ಇರಲಿಲ್ಲ. ಏನೋ ಅಗೋಚರ ಹಿಂಸೆ ಇದ್ದರೂ ಇರಬಹುದು. ಹೀಗಾಗಿ ಮುಂದಿನ ಮಾಘ ಮಾಸದಲ್ಲಿ ಅತಿರುದ್ರ ಮಹಾಯಾಗ ಮಾಡಲಾಗುವುದು’ ಎಂದು ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದರು.

‘ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳಲಿಲ್ಲ ಎಂಬ ಕಾರಣಕ್ಕೆ ಸೂರ್ಯ ಬರಲಿಲ್ಲ ಎಂದುಕೊಳ್ಳಲು ಆಗದು. ಸೂರ್ಯನು ನಂದಿಯ ಪ್ರಾರ್ಥನೆ ಮುಗಿಸಿ ಅರ್ಧ ಮಂಟಪದ ಮೂಲಕ ಗರ್ಭಗುಡಿಯ ತನಕ ಬಂದು ಲಿಂಗವನ್ನೂ ಸ್ಪರ್ಶ ಮಾಡಿದ. ಅಷ್ಟರಲ್ಲಿ ಪ್ರಕೃತಿಯಿಂದ ಸಣ್ಣ ಅಡಚಣೆ ಆಯಿತು. ಅಗೋಚರವಾಗಿ ಶಿವನ ಪೂಜೆಯನ್ನು ಸೂರ್ಯ ಮಾಡಿದ್ದಾನೆ. ರಶ್ಮಿ ಜನರ ಕಣ್ಣಿಗೆ ಕಾಣಿಸದೇ ಇದ್ದರೂ ಹಾಲಿನ ಧಾರೆ ಲಿಂಗದ ಮೇಲೆ ಬೀಳುವಾಗ ವಿಶೇಷ ಪ್ರಖರತೆ ಇದ್ದುದನ್ನು ನಾನು ಗಮನಿಸಿದ್ದೇನೆ. ಭಕ್ತರು ಭಯಪಡುವುದು ಬೇಡ’ ಎಂದರು.

‘ಕಳೆದ ವರ್ಷ ಹೆಚ್ಚು ಸಮಯ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬಿದ್ದಿತ್ತು. ಹಿಂಸೆಯನ್ನು ನಿರೀಕ್ಷೆ ಮಾಡಲಾಗಿತ್ತು. ಇಡೀ ವರ್ಷವನ್ನು ಕೊರೊನಾ ಕಾಡಿತು. ಈ ವರ್ಷ ಸೂರ್ಯನ ಕಿರಣಗಳು ಅಗೋಚರವಾಗಿ ಶಿವನ ಸ್ಪರ್ಶ ಮಾಡಿರುವ ಕಾರಣ ಕೊರೊನಾ ಸೋಂಕು ಅಗೋಚರವಾಗಿಯೇ ಕಾಣೆಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.