ADVERTISEMENT

ಸಿಪಿಆರ್ ತರಬೇತಿ: ವಿಶ್ವಸಂಸ್ಥೆಯಲ್ಲಿ ಬೆಂಗಳೂರಿನ ಬಾಲಕಿಯ ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 11:11 IST
Last Updated 16 ಡಿಸೆಂಬರ್ 2023, 11:11 IST
   

ಬೆಂಗಳೂರು: ಹೃದಯಾಘಾತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸಿಪಿಆರ್‌ ತರಬೇತಿಯನ್ನು ನೂರಾರು ಜನರಿಗೆ ನೀಡುವ ಕಿರುಚಿತ್ರ ನಿರ್ಮಿಸಿರುವ ಬೆಂಗಳೂರು ಮೂಲದ ವೆರುಷ್ಕಾ ಪಾಂಡೆಗೆ ತನ್ನ ಈ ಯೋಜನೆಯನ್ನು ವಿಶ್ವಸಂಸ್ಥೆಯಲ್ಲಿ ಪ್ರದರ್ಶಿಸಲು ಅವಕಾಶ ಪಡೆದಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ 1ಎಂ1ಬಿ ಎಂಬ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತದಿಂದ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಲ್ಲಿ ವೆರುಷ್ಕಾ ಕೂಡಾ ಒಬ್ಬರು.

ಬೆಂಗಳೂರು ಮತ್ತು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಂಚರಿಸಿರುವ ವೆರುಷ್ಕಾ ಅವರು, ಆಶಾ ಕಾರ್ಯಕರ್ತೆಯರು, ಬಸ್ ಚಾಲಕರು, ಕಾರ್ಮಿಕರು, ಭದ್ರತಾ ಸಿಬ್ಬಂದಿಗೆ ಹೃದಯಾಘಾತ ಸಂದರ್ಭದಲ್ಲಿ ನೀಡಲಾಗುವ ಪ್ರಥಮ ಚಿಕಿತ್ಸೆಯ ತರಬೇತಿ ನೀಡಿದ್ದಾರೆ. ಜತೆಗೆ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸುವ ಹಣದಲ್ಲಿ ಹೃದಯಾಘಾತ ಸಂದರ್ಭದಲ್ಲಿ ಮಿಡಿತವನ್ನು ಸಹಜ ಸ್ಥಿತಿಗೆ ತರುವ ಎಲೆಕ್ಟ್ರಿಕಲ್ ಚಾರ್ಜರ್ ಯಂತ್ರವನ್ನು ಹಲವು ಕಾರ್ಖಾನೆಗಳಿಗೆ ನೀಡಿದ್ದಾರೆ.

ADVERTISEMENT

ತಮ್ಮ ಕಿರುಚಿತ್ರ ಪ್ರದರ್ಶನಗೊಂಡ ಕುರಿತು ಮಾಹಿತಿ ಹಂಚಿಕೊಂಡಿರುವ ವೆರುಷ್ಕಾ, ‘ನನ್ನ ‘ಹಾರ್ಟ್‌ ಈಸ್‌ ಎ ವೆಸೆಲ್‌’ ಎಂಬ ಕಿರುಚಿತ್ರ ಪ್ರದರ್ಶನಗೊಂಡಿದ್ದು, ನಮ್ಮೆಲ್ಲರ ಹೃದಯದಲ್ಲಿ ಪ್ರಿತಿ, ಜೀವನೋತ್ಸಾಹ, ಕರುಣೆ ತುಂಬಿರುತ್ತದೆ. ಇಂಥ ಹೃದಯವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಸಿಪಿಆರ್‌ ನೀಡುವ ಮೂಲಕ ಅಕಾಲಿಕ ಮರಣವನ್ನು ತಪ್ಪಿಸಬಹುದು. ಈ ವಿಷಯದ ಕುರಿತು ಕೇವಲ ಜಾಗೃತಿಯಷ್ಟೇ ಅಲ್ಲ. ನಾನು ದೇಶವ್ಯಾಪ್ತಿ ಆಂದೋಲನ ಸೃಷ್ಟಿಸುವ ಉದ್ದೇಶ ಹೊಂದಿದ್ದೇನೆ’ ಎಂದಿದ್ದಾರೆ.

ವೆರುಷ್ಕಾ ಅವರು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.