ADVERTISEMENT

ಪ್ರತಿ ವಾರ್ಡ್‌ನಲ್ಲಿ ‘ಬೆಂಗಳೂರು ಹಬ್ಬ’: ಡಿ.ಕೆ. ಶಿವಕುಮಾರ್‌

ಬಿಎಲ್‌ಆರ್‌ ಹಬ್ಬದಲ್ಲಿ ಪಾಲ್ಗೊಳ್ಳಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮನವಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 16:20 IST
Last Updated 30 ನವೆಂಬರ್ 2023, 16:20 IST
ಬಿಎಲ್‌ಆರ್‌ ಹಬ್ಬ
ಬಿಎಲ್‌ಆರ್‌ ಹಬ್ಬ   

ಬೆಂಗಳೂರು: ಮುಂದಿನ ದಿನಗಳಲ್ಲಿ ನಗರದ ಪ್ರತಿ ವಾರ್ಡ್‌ ಹಾಗೂ ವಿಧಾನಸಭೆ ಕ್ಷೇತ್ರದಲ್ಲಿ ‘ಬೆಂಗಳೂರು ಹಬ್ಬ’ವನ್ನು ಆಯೋಜಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್’ ವತಿಯಿಂದ ಆಯೋಜಿಸಲಾಗಿರುವ ‘ಬಿ.ಎಲ್‌.ಆರ್‌ ಹ‌ಬ್ಬ’ದ ಅಂಗವಾಗಿ ಚಿಕ್ಕಪೇಟೆಯಲ್ಲಿ ಗುರುವಾರ ನಡೆದ ಕೆಂಪೇಗೌಡರ ಎತ್ತಿನ ಬಂಡಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬೆಂಗಳೂರು ಹಬ್ಬ’ದ ಸಂದರ್ಭದಲ್ಲಿ ಎಲ್ಲರೂ ತಮ್ಮ ಮನೆಗಳಲ್ಲೂ ಹಬ್ಬದ ರೀತಿ ಅಲಂಕಾರ ಮಾಡಿ ಸುಂದರ ವಾತಾವರಣ ಮೂಡಿಸಬೇಕು. ಆ ಮೂಲಕ ನಮ್ಮ ಇತಿಹಾಸ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು’ ಎಂದು ಹೇಳಿದರು.

ADVERTISEMENT

‘ನಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ. ನಾವು ನಮ್ಮ ಬೆಂಗಳೂರಿನ ಮೂಲವನ್ನು ಉಳಿಸಿಕೊಂಡು ಹೋಗಬೇಕು. ಅನ್‌ಬಾಕ್ಸಿಂಗ್ ಬೆಂಗಳೂರು ಸಂಸ್ಥೆಯ  ಪ್ರಶಾಂತ್ ಪ್ರಕಾಶ್ ಹಾಗೂ ಅವರ ಸ್ನೇಹಿತರು ತಮ್ಮ ದುಡ್ಡಿನಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ನಾಗರಿಕರೂ ಭಾಗವಹಿಸಬೇಕು’ ಎಂದರು.

‘ನಾಡಪ್ರಭು ಕೆಂಪೇಗೌಡರು ಚಿಕ್ಕಪೇಟೆಯಿಂದ ನಾಲ್ಕು ದಿಕ್ಕಿಗೆ ನಾಲ್ಕು ಜೋಡಿ ಎತ್ತಿನ ಗಾಡಿಯನ್ನು ತೆಗೆದುಕೊಂಡು ಹೋಗಿದ್ದರು. ಎಲ್ಲ ವೃತ್ತಿ, ಎಲ್ಲಾ ಜನಾಂಗ, ಎಲ್ಲಾ ಧರ್ಮದವರನ್ನೂ ಒಟ್ಟಿಗೆ ಸೇರಿಸಿ ಬೆಂಗಳೂರು ನಗರ ಕಟ್ಟಿದರು. ಪ್ರಪಂಚದ ಎಲ್ಲ ಜನ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ಇದಕ್ಕೆ ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯ ಕಾರಣ. ಇದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು’ ಎಂದು ಹೇಳಿದರು.

 ‘ಬಿ.ಎಲ್‌.ಆರ್‌ ಹ‌ಬ್ಬ’ದ ಅಂಗವಾಗಿ ಚಿಕ್ಕಪೇಟೆಯಲ್ಲಿ ಗುರುವಾರ ನಡೆದ ಕೆಂಪೇಗೌಡರ ಎತ್ತಿನ ಬಂಡಿ ಮೆರವಣಿಗೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.