ADVERTISEMENT

ಬೆಂಗಳೂರು | ಅಕ್ರಮ ಗುರುತು ಚೀಟಿ ಸೃಷ್ಟಿ: ಸಮಗ್ರ ತನಿಖೆಗೆ ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 7:49 IST
Last Updated 26 ಅಕ್ಟೋಬರ್ 2023, 7:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರ: iStock

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿಗಳನ್ನು ಸೃಷ್ಟಿಸಿ ವಿತರಿಸಿರುವ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ADVERTISEMENT

ಶಾಸಕ ಎಸ್‌.ಸುರೇಶ್‌ಕುಮಾರ್‌ ನೇತೃತ್ವದ ಬಿಜೆಪಿ ನಿಯೋಗ ಗುರುವಾರ ಚುನಾವಣಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿತು.

ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‌ನಲ್ಲಿ ಮತದಾರರ ನಕಲಿ ಗುರುತುಚೀಟಿಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿತ್ತು. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆತಂಕಕಾರಿ ವಿಚಾರ. ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಅದಕ್ಕಾಗಿ ಪ್ರಕರಣವನ್ನು ಎನ್‍ಐಎ ಅಥವಾ ಸಿಬಿಐಗೆ ಒಪ್ಪಿಸಲು ಶಿಫಾರಸು ಮಾಡಬೇಕು ಎಂದು ಮನವಿಯಲ್ಲಿ ಬಿಜೆಪಿ ಒತ್ತಾಯಿಸಿದೆ.

ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಪ್ರಕಾರ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್‌ ಇನ್ಸ್‌ಪೆಕ್ಟರ್ ಅವರು ಇದೇ 19 ರಂದು ಆರ್‌ಟಿ ನಗರದ ಸುಲ್ತಾನ್‌ ಪಾಳ್ಯ ಮತ್ತು ಬನಶಂಕರಿ ಕಾಂಪ್ಲೆಕ್ಸ್‌ನ ಎಂಎಸ್‌ಎಲ್‌ ಟೆಕ್ನೊ ಸೊಲ್ಯೂಶನ್ಸ್‌ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇವರು ಈ ಎಲ್ಲಾ ಗುರುತಿನ ಚೀಟಿಗಳನ್ನು ಸ್ವಂತ ಲಾಭಕ್ಕಾಗಿ ಸೃಷ್ಟಿಸಿ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನೈಜ ಗುರುತಿನ ಚೀಟಿಗಳೆಂದು ಹಚ್ಚಿನ ಹಣಕ್ಕೆ ನೀಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು ಎಂದು ಮನವಿಯಲ್ಲಿ ಹೇಳಿದೆ.

ಎಂಎಸ್‌ಎಲ್‌ ಟೆಕ್ನೊ ಸೊಲ್ಯೂಷನ್ಸ್‌ ಮಾಲೀಕ ಮೌನೇಶ್‌ ಕುಮಾರ್ ಮತ್ತು ಈತನ ಕೃತ್ಯಕ್ಕೆ ಸಹಕರಿಸಿದ ಭಗತ್‌, ರಾಘವೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿತ್ತು. ಸೆಕ್ಷನ್‌ 420 ಸೇರಿ ಹಲವು ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.