ADVERTISEMENT

ಅತಿ ದಟ್ಟಣೆ ಕಾರಿಡಾರ್‌ ಅತಿಯಾಯಿತೇ ವೆಚ್ಚ?

ವೈಟ್‌ಟಾಪಿಂಗ್‌ ಮಾಡಲಾದ ರಸ್ತೆಗಳ ನಿರ್ವಹಣೆಗೂ ಬೇಕಂತೆ ನೂರಾರು ಕೋಟಿ ರೂಪಾಯಿ

ಪ್ರವೀಣ ಕುಮಾರ್ ಪಿ.ವಿ.
Published 16 ಮೇ 2021, 20:05 IST
Last Updated 16 ಮೇ 2021, 20:05 IST
ನಗರದ ಹಳೆ ಮದ್ರಾಸ್ ರಸ್ತೆ -ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ನಗರದ ಹಳೆ ಮದ್ರಾಸ್ ರಸ್ತೆ -ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ನಗರದ 12 ಅತಿ ದಟ್ಟಣೆಯ ಕಾರಿಡಾರ್‌ಗಳ ನಿರ್ವಹಣೆ ಹೊಣೆಯನ್ನು ಬಿಬಿಎಂಪಿಯ ಬದಲು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಆರ್‌ಡಿಸಿಎಲ್‌) ರಾಜ್ಯ ಸರ್ಕಾರ ವಹಿಸಿದೆ. ಈ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತ ನಾಲ್ಕು ಪ್ಯಾಕೇಜ್‌ಗಳ ಟೆಂಡರ್‌ಗಳನ್ನು ಕೆಆರ್‌ಡಿಸಿಎಲ್‌ ಅಂತಿಮಗೊಳಿಸಿದೆ. ಈ ರಸ್ತೆಗಳ ಉನ್ನತೀಕರಣಕ್ಕೆ ಮತ್ತು ದೈನಂದಿನ ನಿರ್ವಹಣೆಗೆ ಬಳಕೆಯಾಗುವ ಮೊತ್ತ ಹುಬ್ಬೇರುವಂತೆ ಮಾಡಿದೆ!

12 ಕಾರಿಡಾರ್‌ಗಳ ಒಟ್ಟು 191 ಕಿ.ಮೀ ಉದ್ದದ ರಸ್ತೆಗಳ ಪ್ರಾರಂಭಿಕ ಹಂತದ ಉನ್ನತೀಕರಣಕ್ಕೆ ಒಟ್ಟು ₹ 335.17 ಕೋಟಿ ಹಾಗೂ ದೈನಂದಿನ ನಿರ್ವಹಣೆಗೆ ಮೊದಲ ವರ್ಷಕ್ಕೆ ₹ 142.12 ಕೋಟಿ ವೆಚ್ಚವಾಗಲಿದೆ. ಇನ್ನುಳಿದ ನಾಲ್ಕು ವರ್ಷಗಳಲ್ಲಿ ಇವುಗಳ ನಿರ್ವಹಣೆಗೆ ₹ 643.19 ಕೋಟಿ ವೆಚ್ಚವಾಗುತ್ತದೆ ಎಂದು ಕೆಆರ್‌ಡಿಸಿಎಲ್‌ ಅಂದಾಜಿಸಿದೆ. ಅಂದರೆ, ಐದು ವರ್ಷಗಳಲ್ಲಿ ಈ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ವೆಚ್ಚವಾಗುವ ಒಟ್ಟು ವೆಚ್ಚ ₹1120.48 ಕೋಟಿ.

‘ಇದು ಉತ್ಪ್ರೇಕ್ಷಿತ ಮೊತ್ತ. ನಿಜಕ್ಕೂ ಇಷ್ಟು ವೆಚ್ಚವಾಗಲು ಸಾಧ್ಯವೇ ಇಲ್ಲ. ರಸ್ತೆ ಅಭಿವೃದ್ಧಿಗೆ ₹ 335 ಕೋಟಿ ವ್ಯಯಿಸಿ, ಮತ್ತೆ ಅವುಗಳ ನಿರ್ವಹಣೆಗೆ ಐದು ವರ್ಷಗಳಲ್ಲಿ ₹ 785 ಕೋಟಿ ವ್ಯಯ ಮಾಡುವುದರಲ್ಲಿ ಅರ್ಥವಿದೆಯೇ. ರಾಜ್ಯದಲ್ಲಿ ಯಾವುದೇ ರಸ್ತೆ ಅಭಿವೃದ್ಧಿಪಡಿಸಿದರೂ ಅವುಗಳಿಗೆ ಎರಡು ವರ್ಷಗಳ ದೋಷ ಬಾಧ್ಯತಾ ಅವಧಿ ಇರುತ್ತದೆ. ಈ ಅವಧಿಯಲ್ಲಿ ಏನೇ ದೋಷ ಕಾಣಿಸಿಕೊಂಡರೂ ಗುತ್ತಿಗೆದಾರರೇ ಸರಿಪಡಿಸಬೇಕು. ಹಾಗಿದ್ದರೂ ರಸ್ತೆಗಳ ನಿರ್ವಹಣೆಗೆ ಮೊದಲೆರಡು ವರ್ಷಗಳಿಗೆ ₹ 291.35 ಕೋಟಿ ನೀಡುವ ಅಗತ್ಯವೇನು. ಯಾರಿಗೆ ಅನುಕೂಲ ಮಾಡಿಕೊಡಲು ಸರ್ಕಾರದ ಬೊಕ್ಕಸದ ಹಣವನ್ನು ವೃಥಾ ವ್ಯಯಿಸಲಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ADVERTISEMENT

ಕೆಆರ್‌ಡಿಸಿಎಲ್‌ ಇಷ್ಟೊಂದು ಮೊತ್ತದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ್ದರೂ, ಆರ್ಥಿಕ ಇಲಾಖೆ ಸದ್ಯಕ್ಕೆ ₹ 100 ಕೋಟಿಯನ್ನು ಮಾತ್ರ ಈ ರಸ್ತೆಗಳ ನಿರ್ವಹಣೆಗಾಗಿ ಒದಗಿಸಿದೆ. ಉಳಿಕೆ ಮೊತ್ತವನ್ನು ಬಿಬಿಎಂಪಿಯ ಸಂಪನ್ಮೂಲಗಳಿಂದ ಬಳಸಬೇಕು ಎಂದು ಹೇಳಿದೆ.

ಈ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೆಆರ್‌ಡಿಸಿಎಲ್‌ಗೆ ನೀಡುವುದಕ್ಕೆ ಆರಂಭದಲ್ಲೇ ಬಿಬಿಎಂಪಿ ವಿರೋಧ ವ್ಯಕ್ತಪಡಿಸಿತ್ತು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದ ಬಿಬಿಎಂಪಿಯ ಹಿಂದಿನ ಆಯುಕ್ತರು ಈ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಹೊಣೆಯನ್ನು ಪಾಲಿಕೆಗೇ ನೀಡುವಂತೆ ಕೋರಿದ್ದರು. ಈ ಪ್ರಸ್ತಾವಕ್ಕೆ ಸಮನ್ವಯ ಸಮಿತಿ ಸಭೆಯಲ್ಲಿ ಹಿಂದಿನ ಮುಖ್ಯ ಕಾರ್ಯದರ್ಶಿಯವರೂ ಸಮ್ಮತಿ ಸೂಚಿಸಿದ್ದರು. ಆ ಬಳಿಕ ಕೆಆರ್‌ಡಿಸಿಎಲ್‌ ಅಧ್ಯಕ್ಷರ ಒತ್ತಡಕ್ಕೆ ಸರ್ಕಾರ ಮಣಿದಿತ್ತು. 2020ರ ನ 12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ರಸ್ತೆಗಳ ನಿರ್ವಹಣೆಯನ್ನು ಕೆಆರ್‌ಡಿಸಿಎಲ್‌ಗೆ ನೀಡುವುದಕ್ಕೆ ಅನುಮೋದನೆ ನೀಡಿತ್ತು.

ಈ ಯೋಜನೆಯನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಬೇಕು. ಕೊರೊನಾದಂತಹ ಬಿಕ್ಕಟ್ಟಿನ ಸಮಯದಲ್ಲಿ ಇಂತಹ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಯೊಬ್ಬರು ಒತ್ತಾಯಿಸಿದರು.

ಅಭಿವೃದ್ಧಿ ಆಗಬೇಕಿರುವುದು 67 ಕಿ.ಮೀ. ಮಾತ್ರ!

ಕೆಆರ್‌ಡಿಸಿಎಲ್‌ಗೆ ವಹಿಸಲಾಗಿರುವ 191 ಕಿ.ಮೀ ರಸ್ತೆಗಳಲ್ಲಿ ಬಿಬಿಎಂಪಿ ಅಧೀನದ 98 ಕಿ.ಮೀ ರಸ್ತೆ ಸೇರಿದೆ. ಇದರಲ್ಲಿ 53.42 ಕಿ.ಮೀ ರಸ್ತೆ ವೈಟ್‌ಟಾಪಿಂಗ್ ಯೋಜನೆಯಡಿ ಅಭಿವೃದ್ಧಿಗೊಂಡಿದೆ. 20.8 ಕಿ.ಮೀ ಉದ್ದದ ರಸ್ತೆಯಲ್ಲಿ ನಮ್ಮ ಮೆಟ್ರೊ ಕಾಮಗಾರಿ ನಡೆಯಲಿದೆ. ಹಾಗಾಗಿ ಸದ್ಯಕ್ಕೆ ಅಭಿವೃದ್ಧಿಪಡಿಸಬೇಕಾದ ರಸ್ತೆಗಳ ಉದ್ದ 67.88 ಕಿ.ಮೀ ಮಾತ್ರ. ಆದರೂ 191 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪಡಿಸಬೇಕಿದೆ ಎಂದು ಟೆಂಡರ್‌ ಕರೆಯಲಾಗಿದೆ ಎನ್ನುತ್ತವೆ ಬಿಬಿಎಂಪಿ ಮೂಲಗಳು.

ಅಧಿಕಾರಯುಕ್ತ ಸಮಿತಿ ಬಿಬಿಎಂಪಿ ಟೆಂಡರ್‌ಗಳಿಗೆ ಕೇವಲ ಶೇ 1ರಷ್ಟು ಟೆಂಡರ್‌ ಪ್ರೀಮಿಯಂಗಳನ್ನು (ಟೆಂಡರ್‌ನ ಮೂಲ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತ ) ಮಾತ್ರ ಅನುಮೋದಿಸುತ್ತಾ ಬಂದಿದೆ. ಎರಡು ವರ್ಷಗಳಲ್ಲಿ ಯಾವುದೇ ಟೆಂಡರ್‌ಗೂ ಇದಕ್ಕಿಂತ ಹೆಚ್ಚು ಟೆಂಡರ್ ಪ್ರೀಮಿಯಂ ನೀಡಿಲ್ಲ. ಆದರೆ, ಕೆಆರ್‌ಡಿಸಿಎಲ್‌ನ ಟೆಂಡರ್‌ಗಳ ಹೆಚ್ಚುವರಿ ಪ್ರೀಮಿಯಂ ಮೊತ್ತ ಶೇ 8ರಿಂದ ಶೇ 9ರವರೆಗಿದೆ. ಇದಕ್ಕೆ ಅಧಿಕಾರಯುಕ್ತ ಸಮಿತಿ ಅನುಮೋದನೆ ನೀಡಲು ಸಾಧ್ಯವೇ ಎಂಬುದು ಪ್ರಶ್ನೆ.

‘ಕೆಆರ್‌ಡಿಸಿಎಲ್‌ನ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ಬೆಂಗಳೂರಿನಲ್ಲಿ ಬಿಬಿಎಂಪಿಯ ಕಾಮಗಾರಿಯನ್ನು ಕೇವಲ ಶೇ 1ರಷ್ಟು ಟೆಂಡರ್ ಪ್ರೀಮಿಯಂನಲ್ಲಿ ನಡೆಸುತ್ತಿದ್ದಾರೆ. ಅದೇ ಗುತ್ತಿಗೆದಾರರಿಗೆ ಶೇ 8ಕ್ಕಿಂತ ಹೆಚ್ಚು ಪ್ರೀಮಿಯಂ ನೀಡುವ ಔಚಿತ್ಯವೇನು. ಬಿಬಿಎಂಪಿ ಕಾಮಗಾರಿಗಳ ಟೆಂಡರ್ ಪ್ರೀಮಿಯಂ ಮೊತ್ತವನ್ನು ಪಾಲಿಕೆಯೇ ಭರಿಸಬೇಕು ಎಂದು ಷರತ್ತು ವಿಧಿಸಲಾಗುತ್ತದೆ. ಇದೇ ಷರತ್ತುಗಳನ್ನು ಕೆಆರ್‌ಡಿಸಿಎಲ್‌ಗೆ ಏಕೆ ಅನ್ವಯಿಸಿಲ್ಲ’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಉತ್ತರ ಸಿಗದ ಪ್ರಶ್ನೆಗಳು?

lರಸ್ತೆ ನಿರ್ವಹಣೆಗಾಗಿ ಬಿಬಿಎಂಪಿಗೆ ನಯಾ ಪೈಸೆಯನ್ನೂ ನೀಡದ ಸರ್ಕಾರ ಕೆಆರ್‌ಡಿಸಿಎಲ್‌ಗೆ ವರ್ಷಕ್ಕೆ ₹ 150 ಕೋಟಿವರೆಗೂ ನೀಡುತ್ತಿರುವುದರ ಗುಟ್ಟೇನು?

lಈ 12 ಕಾರಿಡಾರ್‌ಗಳಲ್ಲಿ 53.42 ಕಿ.ಮೀಗಳಷ್ಟು ಉದ್ದದ ವೈಟ್ ಟಾಪಿಂಗ್‌ ರಸ್ತೆಗಳಿವೆ. ಇವುಗಳ ನಿರ್ವಹಣೆಗೆ ತೀರಾ ಕಡಿಮೆ ವೆಚ್ಚವಾಗುತ್ತದೆ. ಆದರೂ ಕಾರಿಡಾರ್‌ಗಳ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಏಕೆ ಬೇಕು?

lಹೆಬ್ಬಾಳ–ಕೆ.ಆರ್.ಪುರ–ಸಿಲ್ಕ್‌ಬೋರ್ಡ್‌ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಾಣವಾಗುವುದರಿಂದ ಈ ಹಂತದಲ್ಲಿ ಇಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಸಾಧುವೇ?

₹ 285 ಕೋಟಿ ಎಲ್ಲಿಂದ ತರಲಿದೆ ಬಿಬಿಎಂಪಿ?

ಬಿಬಿಎಂಪಿ ತನ್ನ ಅಧೀನದ 13 ಸಾವಿರ ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ ವೆಚ್ಚ ಮಾಡುವುದು ₹ 25 ಕೋಟಿ. ಆದರೆ, 12 ಕಾರಿಡಾರ್‌ಗಳ ಐದು ವರ್ಷಗಳ ನಿರ್ವಹಣೆಗೆ ಬಿಬಿಎಂಪಿ ₹ 285 ಕೋಟಿ ಭರಿಸಬೇಕಿದೆ. ನೂರಾರು ಕಾಮಗಾರಿಗಳ ಸಾವಿರಾರು ಕೋಟಿ ರೂಪಾಯಿ ಬಿಲ್‌ಗಳು ಬಾಕಿ ಇವೆ. ವಸ್ತುಸ್ಥಿತಿ ಹೀಗಿರುವಾಗ ಈ ಕೆಆರ್‌ಡಿಸಿಎಲ್‌ಗೆ ರಸ್ತೆ ನಿರ್ವಹಣೆಯ ಮೊತ್ತವನ್ನು ಭರಿಸಲು ಬಿಬಿಎಂಪಿಗೆ ಸಾಧ್ಯವಾಗಲಿದೆಯೇ ಎಂಬುದು ಪ್ರಶ್ನೆ.

ವಿವಿಧ ಕಾಮಗಾರಿಗಳು ಸೇರಿವೆ: ಕೆಆರ್‌ಡಿಸಿಎಲ್‌

‘ನಿಗಮವು 12 ಅತಿ ಹೆಚ್ಚು ದಟ್ಟಣೆಯ ಕಾರಿಡಾರ್‌ಗಳಲ್ಲಿ 68 ಕಿ.ಮೀ ರಸ್ತೆಯನ್ನು ಮಾತ್ರ ಅಭಿವೃದ್ಧಿಪಡಿಸಿದರೂ 191 ಕಿ.ಮೀ ಉದ್ದಕ್ಕೂ ವಿವಿಧ ಕಾಮಗಾರಿಗಳನ್ನು ನಿರ್ವಹಿಸಬೇಕಾಗಿದೆ. ಇಷ್ಟೂ ಉದ್ದಕ್ಕೂ ಹೊಸತಾಗಿ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಿದ್ದೇವೆ. ವಿಭಜಕಗಳಲ್ಲಿ ಗಿಡಗಳನ್ನು ಬೆಳೆಸಲಿದ್ದೇವೆ. ಈ ರಸ್ತೆಗಳನ್ನು ಬೇಕಾಬಿಟ್ಟಿ ದಾಟುವುದನ್ನು ತಡೆಯಲು ಎತ್ತರದ ರಸ್ತೆ ವಿಭಜಕ ಅಳವಡಿಸಲಿದ್ದೇವೆ. ರಸ್ತೆ ಪಕ್ಕದ ಮಳೆ ನೀರು ಚರಂಡಿಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸಲಿದ್ದೇವೆ. ನಿರ್ವಹಣೆ ವೆಚ್ಚ ಪ್ರತಿವರ್ಷ ಶೇ 5ರಷ್ಟು ಹೆಚ್ಚಳವಾಗಲಿದೆ’ ಎಂದು ಕೆಆರ್‌ಡಿಸಿಎಲ್‌ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘12 ಕಾರಿಡಾರ್‌ಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಟೆಂಡರ್‌ಗಳು ಅಂತಿಮಗೊಂಡಿವೆ. ಆದರೆ, ಅದಕ್ಕೆ ಅಧಿಕಾರಯುಕ್ತ ಸಮಿತಿಯ ಅನುಮೋದನೆ ಬಾಕಿ ಇದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.