ADVERTISEMENT

ಬೆಂಗಳೂರು: ಕಾರಿನ ಲಾಕ್ ತೆರೆದು ನಗದು, ಚಿನ್ನ ಕಳವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:33 IST
Last Updated 25 ಅಕ್ಟೋಬರ್ 2024, 16:33 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಕಾರಿನ ಲಾಕ್ ತೆರೆದು ಹಣ ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ, ₹13.75 ಲಕ್ಷ ಮೌಲ್ಯದ ವಸ್ತುಗಳು ವಶಪಡಿಸಿಕೊಂಡಿದ್ದಾರೆ.

ಈಜಿಪುರ ನಿವಾಸಿ ಸೈಯದ್‌ ಮಹಮದ್ ವಾಸಿಫ್‌ ಎಂಬಾತನನ್ನು ಬಂಧಿಸಿ, 144 ಗ್ರಾಂ ಚಿನ್ನ, ₹ 2 ಲಕ್ಷ ನಗದು ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ. 

ಸೆ.19ರಂದು ಕಾರಿನಲ್ಲಿ ಮಹಿಳೆಯೊಬ್ಬರು ತಮ್ಮ ಪತಿಯನ್ನು ಬಾಣಸವಾಡಿಯಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆ ಸಮೀಪ ಕಿರಿದಾದ ರಸ್ತೆಯಲ್ಲಿ ಕಾರು ನಿಲುಗಡೆ ಮಾಡಿದ್ದರು. ಅದರಲ್ಲಿ ಹಣ, ಚಿನ್ನಾಭರಣ ಇಟ್ಟು ಆಸ್ಪತ್ರೆ ಒಳಗಡೆ ಹೋಗಿದ್ದರು. ಆರೋಪಿ ಸ್ಕೇಲ್ ಬಳಸಿ ಕಾರಿನ ಲಾಕ್ ತೆರೆದು ಹಣ, ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿ, ಆತನ ಕಾರಿನಲ್ಲಿ ಇಟ್ಟಿದ ವಸ್ತುಗಳನ್ನು ವಶಪಡಿಸಿಕೊಂಡರು.

‘ಅನಾರೋಗ್ಯ ಪೀಡಿತ ತನ್ನ ತಾಯಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಕಳ್ಳತನ ಮಾಡಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ಈತನ ವಿರುದ್ಧ ಇತರೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ‘ ಎಂದು ಪೊಲೀಸರು ಹೇಳಿದರು.

‘ಹಣ, ಚಿನ್ನಾಭರಣವನ್ನು ಕಾರಿನಲ್ಲಿ ಇಡುವ ಬಗ್ಗೆ ಎಚ್ಚರವಹಿಸಬೇಕು. ಸುರಕ್ಷಿತ ಸ್ಥಳದಲ್ಲಿ ಕಾರುಗಳ ನಿಲುಗಡೆ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.