ADVERTISEMENT

ನೆರೆಯವರಿಗೆ ಹೊರೆಯಾಗಲಿದೆಯೇ ಕೆರೆ...?

ಪ್ರತಿ ವರ್ಷ ನಗರದ ಕೆರೆಗಳ ಒಡಲು ಸೇರುತ್ತಿದೆ 33.80 ಟಿಎಂಸಿ ಅಡಿ ನೀರು l ಕೆಲವೇ ವರ್ಷಗಳಲ್ಲಿ 44ಟಿಎಂಸಿ ಅಡಿಗೆ ಹೆಚ್ಚಲಿದೆ ನೀರಿನ ಪ್ರಮಾಣ

ಪ್ರವೀಣ ಕುಮಾರ್ ಪಿ.ವಿ.
Published 1 ಡಿಸೆಂಬರ್ 2019, 19:46 IST
Last Updated 1 ಡಿಸೆಂಬರ್ 2019, 19:46 IST
   

ಬೆಂಗಳೂರು: ಎರಡೇ ತಿಂಗಳಲ್ಲಿ ನಗರದ ಮೂರು ಕೆರೆಗಳ ಕೋಡಿಗಳು ಒಡೆದಿವೆ. ಚೊಕ್ಕಸಂದ್ರ, ಹೊಸಕೆರೆಹಳ್ಳಿ ಹಾಗೂ ಹುಳಿಮಾವು ಕೆರೆಗಳ ನೀರು ಹೊರನುಗ್ಗಿ ಸೃಷ್ಟಿಯಾದ ಪ್ರವಾಹಗಳಿಂದ ಆಸುಪಾಸಿನ ಬಡಾವಣೆಗಳ ಸಾವಿರಾರು ನಿವಾಸಿಗಳ ಬದುಕು ಹೈರಾಣಾಗಿದೆ. ಈ ಪ್ರವಾಹಗಳು ಪೀಠೋಪಕರಣಗಳು, ಕಾರು, ಬೈಕ್‌, ಟಿ.ವಿ. ಫ್ರಿಜ್‌ ಮೊದಲಾದ ಎಲೆಕ್ಟ್ರಾನಿಕ್ಸ್‌ ಪರಿಕರಗಳು ಸೇರಿ ನೂರಾರು ಕೋಟಿ ಮೌಲ್ಯದಸ್ವತ್ತುಗಳನ್ನು ಆಪೋಶನ ಪಡೆದುಕೊಂಡಿವೆ.

ಕೆರೆಯ ಕಟ್ಟೆ ಒಡೆದೆರೆ ಏನೆಲ್ಲ ಅನಾಹುತ ಆದೀತು ಎಂಬ ತುಣುಕನ್ನು ಮಾತ್ರ ನಾವೀಗ ನೋಡಿದ್ದೇವೆ. ಕೇವಲ 40 ಎಕರೆ ವಿಸ್ತೀರ್ಣದ ಹುಳಿಮಾವು ಕೆರೆಯ ಕಾಲು ಭಾಗದಷ್ಟು ನೀರೇ ಸಾವಿರಕ್ಕೂ ಅಧಿಕ ಕುಟುಂಬಗಳಲ್ಲಿ ತಲ್ಲಣ ಸೃಷ್ಟಿಸುತ್ತದೆ ಎಂದಾದರೆ, ಇನ್ನು 910 ಎಕರೆಗಳಷ್ಟು ವಿಶಾಲವಾಗಿರುವ ಬೆಳ್ಳಂದೂರು ಕೆರೆಯ ಸಹನೆಯ ಕಟ್ಟೆ ಒಡೆದರೆ ಪರಿಸ್ಥಿತಿ ಹೇಗಿದ್ದೀತು? ಊಹಿಸಿಕೊಂಡರೆ ಮನಸ್ಸು
ದಿಗಿಲುಗೊಳ್ಳುತ್ತದೆ.

ಈ ಬಾರಿ ಚೆನ್ನಾಗಿ ಮಳೆಯಾಗಿ ಕೆರೆಗಳು ತುಂಬಿದ್ದರಿಂದ ಪ್ರವಾಹ ಉಂಟಾಗುವ ಪರಿಸ್ಥಿತಿ ಉಂಟಾಯಿತೇ? ಮಳೆಯಷ್ಟೇ ಈ ಪ್ರಕೋಪಕ್ಕೆ ಕಾರಣವಲ್ಲ. ಇದಕ್ಕೆ ಅನ್ಯ ಕಾರಣಗಳೂ ಇವೆ. ನಗರದಲ್ಲಿರುವ ಅಷ್ಟೂ ಕೆರೆಗಳು ಹೆಚ್ಚಿನ ಒತ್ತಡ ಎದುರಿಸುತ್ತಿರುವುದು ತಮ್ಮೊಡಲನ್ನು ಸೇರಿಕೊಳ್ಳುತ್ತಿರುವ ತ್ಯಾಜ್ಯ ನೀರಿನಿಂದ. ತ್ಯಾಜ್ಯನೀರಿನ ಜೊತೆ ಈ ಬಾರಿ ಮಳೆ ನೀರು ಸೇರಿಕೊಂಡಿದ್ದರಿಂದ ನಗರದ ಬಹುತೇಕ ಕೆರೆಗಳು ಭರ್ತಿಯಾಗಿವೆ.

ADVERTISEMENT

ಹುಳಿಮಾವು ಕೆರೆಯ ದಂಡೆಯನ್ನು ಒಡೆಯುವುದಕ್ಕೆ ರಾಜಕಾಲುವೆಯಲ್ಲಿ ಹರಿಯುತ್ತಿದ್ದ ದುರ್ವಾಸನೆಯುಕ್ತ ಕೊಳಚೆ ನೀರಿನಿಂದ ಮುಕ್ತಿ ನೀಡುವಂತೆ ಸ್ಥಳೀಯರು ಒತ್ತಡ ಹೇರಿದ್ದೂ ಕಾರಣ. ಇದೇ ಕೊಳಚೆ ನೀರನ್ನೇ ಒಡಲಿನಲ್ಲಿ ತುಂಬಿಕೊಂಡಿರುವ ಇತರ ಕೆರೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ.

ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ನಗರದಲ್ಲಿ 937 ಕೆರೆಗಳಿವೆ. ಅವುಗಳಲ್ಲಿ ಈಗ ಜೀವಂತಿಕೆ ಉಳಿಸಿಕೊಂಡಿರುವುದು 210 ಕೆರೆಗಳು ಮಾತ್ರ. ಉಳಿದ ಅಷ್ಟೂ ಕೆರೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಆಪೋಶನ ತೆಗೆದುಕೊಳ್ಳಲಾಗಿದೆ. ಅಳಿದುಳಿದ ಈ ಕೆರೆಗಳೂ ಹಿಂದಿದ್ದಷ್ಟು ವ್ಯಾಪ್ತಿಯನ್ನು ಉಳಿಸಿಕೊಂಡಿಲ್ಲ. ಒಂದೆಡೆ ಕೆರೆಗಳ ಸಂಖ್ಯೆ ಕಡಿಮೆಯಾದರೆ, ವರ್ಷದಿಂದ ವರ್ಷಕ್ಕೆ ತುಂಬುವ ಹೂಳಿನಿಂದಾಗಿ ಅವುಗಳ ಆಳವೂ ಕಡಿಮೆಯಾಗಿದೆ. ಕೆರೆಯಂಗಳ ಒತ್ತುವರಿಯಾಗಿದ್ದು, ಅವುಗಳ ವ್ಯಾಪ್ತಿ ಮತ್ತಷ್ಟು ಕಿರಿದಾಗಿದೆ. ನಗರದ ಸರಾಸರಿ ಮಳೆಯ ಪ್ರಮಾಣ ಮಾತ್ರ ಹಿಂದಿನಷ್ಟೇ ಇದೆ. ಈಗ ಉಳಿದಿರುವ ಕೆರೆಗಳು ಮಳೆ ನೀರಿನ ಅಷ್ಟೂ ಒತ್ತಡವನ್ನು ತಾಳಿಕೊಳ್ಳಬೇಕು.

ಅಳಿದುಳಿದ ಕೆರೆಗಳ ಸ್ಥಿತಿ ತುರ್ತು ನಿಗಾ ಘಟಕದಲ್ಲಿ (ಐಸಿಯು) ಕೊನೆಯ ದಿನ ಎಣಿಸುತ್ತಿರುವ ರೋಗಿಯಂತಿದೆ. ಅವುಗಳ ಪರಿಸರ ವ್ಯವಸ್ಥೆ ಸಂಪೂರ್ಣ ನಾಶವಾಗಿವೆ. ಅವುಗಳ ಒಡಲಿನಲ್ಲಿರುವುದು ಜೀವಜಲವಲ್ಲ; ವಿಷಯುಕ್ತ ತ್ಯಾಜ್ಯ ನೀರು. ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಅವರ ಮಾತಿನಲ್ಲಿ ಹೇಳುವುದಾದರೆ, ‘ಅವು ಜಲಕಾಯಗಳಲ್ಲ; ಮಲ ಗುಂಡಿಗಳು’.

1.20 ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಸುಮಾರು 28 ಲಕ್ಷ ಕುಟುಂಬಗಳಿವೆ. ಜಲಮಂಡಳಿಯ ಅಂಕಿಅಂಶಗಳ ಪ್ರಕಾರ ನಗರದಲ್ಲಿ 9.8 ಲಕ್ಷ ಮನೆಗಳು ಮಾತ್ರ ಒಳಚರಂಡಿ ಸಂರ್ಪಕ ಪಡೆದಿವೆ. ಅಂದರೆ ಮೂರನೇ ಎರಡರಷ್ಟು ಮನೆಗಳಿಗೆ ಒಳಚರಂಡಿ ಸಂಪರ್ಕ ಇಲ್ಲ.

ನಿತ್ಯ ಕೆಆರ್‌ಎಸ್‌ ಜಲಾಶಯದಿಂದ ನಗರಕ್ಕೆ ನಿತ್ಯ ಪೂರೈಕೆ ಆಗುವ ಕಾವೇರಿ ನೀರಿನ ಪ್ರಮಾಣ 140 ಕೋಟಿ ಲೀಟರ್. ನಗರದಲ್ಲಿರುವ ಅಂದಾಜು 4 ಲಕ್ಷ ಬೋರ್‌ವೆಲ್‌ಗಳ ಮೂಲಕ ಮೇಲೆತ್ತುವ ನೀರಿನ ಪ್ರಮಾಣ ಇದರಲ್ಲಿ ಸೇರಿಲ್ಲ.

ಜಲಮಂಡಳಿ ಹೇಳಿಕೊಳ್ಳುವಂತೆ ನಿತ್ಯ 140 ಕೋಟಿ ತ್ಯಾಜ್ಯನೀರು ನಗರದಲ್ಲಿ ಉತ್ಪತ್ತಿಯಾಗುತ್ತದೆ. ಅದರಲ್ಲಿ ನಿತ್ಯ 72 ಕೋಟಿ ಲೀಟರ್‌ ನೀರನ್ನು ಸಂಸ್ಕರಿಸುವಷ್ಟು ಸಾಮರ್ಥ್ಯ ಮಾತ್ರ ಮಂಡಳಿಗಿದೆ. ವಾಸ್ತವದಲ್ಲಿ ನಿತ್ಯ ಸಂಸ್ಕರಣೆಯಾಗುವುದು 52 ಕೋಟಿ ಲೀಟರ್‌ ನೀರು ಮಾತ್ರ. ಇನ್ನುಳಿದ ತ್ಯಾಜ್ಯ ನೀರು ಸಂಸ್ಕರಣೆಗೊಳ್ಳದೆಯೇ ಕೆರೆಗಳ ಒಡಲನ್ನು ಸೇರಿಕೊಳ್ಳುತ್ತಿದೆ. ಮಳೆ ನೀರನ್ನಷ್ಟೇ ಹರಿಸಬೇಕಾದ ರಾಜಕಾಲುವೆಗಳಲ್ಲಿ ವರ್ಷಪೂರ್ತಿ ಹರಿಯುವ ಕರ್ರಗಿನ ಕೊಳಕು ನೀರು ಕೆರೆಗಳ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ.

ಕೆರೆ ಎಷ್ಟು ಒತ್ತಡವನ್ನು ತಾಳಿಕೊಳ್ಳಬಲ್ಲದು. ಒಂದಲ್ಲ ಒಂದು ದಿನ ಅವುಗಳ ಸಹನೆಯ ಕಟ್ಟೆಯೂ ಒಡೆಯಬೇಕಲ್ಲವೇ. ನಾವು ಈಗಲೇ ಎಚ್ಚೆತ್ತುಕೊಂಡು ನೀರಿನ ಸಮಗ್ರ ನಿರ್ವಹಣೆ ಕುರಿತು ಸಮಗ್ರ ಯೋಜನೆ ರೂಪಿಸಿ ಅನುಷ್ಠಾನಗೊಳಿಸದಿದ್ದರೆ, ಅವೆಲ್ಲವೂ ಮುಂದೊಂದು ದಿನ ಆಸುಪಾಸಿನ ನಿವಾಸಿಗಳಿಗೆ ಹೊರೆಯಾಗುವುದಂತೂ ಖಂಡಿತ.

ಜಲಕಾಯಗಳ ಅವಸಾನಕ್ಕೆ ಮುನ್ನುಡಿ ಬರೆದ ಕಾವೇರಿ

ಈ ಹಿಂದೆ ನಗರದ ಕುಡಿಯುವ ನೀರಿನ ಬೇಡಿಕೆ ಪೂರೈಸುತ್ತಿದ್ದುದು ಇಲ್ಲಿನ ಕೆರೆಗಳೇ. ಜನ ದಿನ ಬಳಕೆಗೆ ತಿಪ್ಪಗೊಂಡನಹಳ್ಳಿ ಕೆರೆ, ಹೆಸರಘಟ್ಟ ಕೆರೆ ಹಾಗೂ ಮನೆ ಮನೆಗಳಲ್ಲಿದ್ದ ಬಾವಿಗಳನ್ನೇ ಆಶ್ರಯಿಸಿದ್ದರು. ನಗರಕ್ಕೆ 1974ರಿಂದ ಕಾವೇರಿ ನೀರು ಪೂರೈಕೆ ಆರಂಭವಾಯಿತು. ಈ ನಡೆಯೇ ಕೆರೆಗಳ ಅವಸಾನಕ್ಕೆ ಮುನ್ನುಡಿ ಬರೆಯಿತು. ಸುಲಭದಲ್ಲಿ ಮನೆಯೊಳಗೆ ಕಾವೇರಿ ನೀರು ಪೂರೈಕೆಯಾಗಿದ್ದರಿಂದ ಕೆರೆಗಳ ಕಾಳಜಿಯನ್ನು ಜನರು ಮರೆಯುವಂತೆ ಮಾಡಿತು.

ಇತ್ತೀಚಿನ ದಶಕಗಳಲ್ಲಿ 43 ದೊಡ್ಡ ಕೆರೆಗಳನ್ನು ನಗರ ಕಳೆದುಕೊಂಡಿದೆ. ಧರ್ಮಾಂಬುಧಿ ಕೆರೆ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಜಾಗ ಬಿಟ್ಟುಕೊಟ್ಟರೆ, ಸಂಪಂಗಿ ಕೆರೆಯಲ್ಲಿ ಕಂಠೀರವ ಒಳಾಂಗಣ ಕ್ರೀಡಾಂಗಣ ತಲೆ ಎತ್ತಿದೆ. ಕಲಾಸಿಪಾಳ್ಯ ಕೆರೆ ಬಸ್‌ನಿಲ್ದಾಣವಾಗಿದೆ. ಅಕ್ಕಿತಿಮ್ಮನಹಳ್ಳಿ ಕೆರೆಯಲ್ಲಿ ಹಾಕಿ ಕ್ರೀಡಾಂಗಣ, ಶೂಲೆ ಕೆರೆಯಲ್ಲಿ ಫುಟ್ಬಾಲ್‌ ಕ್ರೀಡಾಂಗಣಗಳಿಗೆ ನೆಲೆ ಒದಗಿಸಿವೆ. ಇನ್ನುಳಿದ ಪ್ರಮುಖ ಕೆರೆಗಳಲ್ಲಿ ಬಡಾವಣೆಗಳು ನಿರ್ಮಾಣವಾಗಿವೆ.

ಹೆಚ್ಚಲಿದೆ ಒತ್ತಡ

ಸದ್ಯಕ್ಕೆ ಕೆಆರ್‌ಎಸ್‌ ಜಲಾಶಯದಿಂದ ವರ್ಷಕ್ಕೆ 19 ಟಿಎಂಸಿ ಅಡಿಗಳಷ್ಟು ಕಾವೇರಿ ನೀರು ನಗರಕ್ಕೆ ಪೂರೈಕೆ ಆಗುತ್ತಿದೆ. ಅದರ ಜೊತೆ ಮಳೆ ನೀರು ಸೇರಿ ಒಟ್ಟು 33.80 ಟಿಎಂಸಿ ಅಡಿ ನೀರಿ ನಗರದ ಕೆರೆಗಳನ್ನು ಸೇರುತ್ತಿದೆ. ಕಾವೇರಿ ಐದನೇ ಹಂತದ ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಯಿಂದ ಒಟ್ಟು 12 ಟಿಎಂಸಿ ಅಡಿ ನೀರನ್ನು ಪೂರೈಸುವ ಕಾರ್ಯಕ್ರಮಗಳೂ ಅನುಷ್ಠಾನ ಹಂತದಲ್ಲಿದೆ. ಇದೂ ಸೇರಿದರೆ ಇನ್ನು ಮೂರು– ನಾಲ್ಕು ವರ್ಷಗಳಲ್ಲಿ ಹೆಚ್ಚೂ ಕಡಿಮೆ 44 ಟಿಎಂಸಿ ಅಡಿಗಳಷ್ಟು ನೀರಿನ ಒತ್ತಡವನ್ನು ಈಗಿರುವ 210 ಕೆರೆಗಳು ತಾಳಿಕೊಳ್ಳಬೇಕು.

ನೀರನ್ನು ತರಿಸುವ ಬಗ್ಗೆಯೇ ಹೆಚ್ಚಿ ಚಿಂತನೆ ನಡೆಸಿರುವ ಸರ್ಕಾರಗಳು ಅವುಗಳ ಸಮಗ್ರ ನಿರ್ವಹಣೆ ಬಗ್ಗೆ ಎಳ್ಳಿನಿತೂ ತಲೆಕೆಡಿಸಿಕೊಂಡಿಲ್ಲ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ನೀರೇ ನಗರದ ಪಾಲಿಕೆ ಕಂಟಕಪ್ರಾಯವಾಗಲಿದೆ ಎಂದು ಎಚ್ಚರಿಸುತ್ತಾರೆ ತಜ್ಞರು.

‘ಕೆರೆಗಳನ್ನು ಮತ್ತೆ ಜೋಡಿಸಬೇಕಿದೆ’

ಸಾವಿರ ಕೆರೆಗಳ ನಾಡು ಎಂದೇ ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದವು. ಎತ್ತರ ಪ್ರದೇಶದ ಕರೆ ಭರ್ತಿಯಾದರೆ, ರಾಜಕಾಲುವೆ ಮೂಲಕ ಅದರ ನೀರು ಸ್ವಲ್ಪ ತಗ್ಗಿನಲ್ಲಿರುವ ಇನ್ನೊಂದು ಕೆರೆಗೆ ಹರಿಯುತ್ತಿತ್ತು, ಅದು ಭರ್ತಿಯಾದರೆ ಅದಕ್ಕಿಂತ ತಗ್ಗಿನ ಜಲಕಾಯಕ್ಕೆ ನೀರು ಸೇರುತ್ತಿತ್ತು. ಆದರೆ ಈ ವ್ಯವಸ್ಥೆ ಈಗ ಛದ್ರವಾಗಿದೆ. ಸಂತುಲಿತ ವ್ಯವಸ್ಥೆಯನ್ನು ಹಾಳುಗೆಡವಲಾಗಿದೆ ಎನ್ನುತ್ತಾರೆ ನಗರ ಯೋಜನಾ ತಜ್ಞ ವಿ.ರವಿಚಂದರ್‌.

ರಾಜಕಾಲುವೆ ಒತ್ತುವರಿಯಾಗಿವೆ. ಕೆಲವೆಡೆ ಮೂಲವಿನ್ಯಾಸ ಬದಲಿಸಿ, ಕೆರೆಗಳಿಗೆ ಸಂಬಂಧವೇ ಇಲ್ಲದಂತೆ ರಾಜಕಾಲುವೆ ನಿರ್ಮಿಸಲಾಗಿದೆ. ಹಾಗಾಗಿ ನೀರು ಎಲ್ಲಿ ತಗ್ಗು ಪ್ರದೇಶ ಸಿಗುತ್ತದೋ ಅದರತ್ತ ನುಗ್ಗುತ್ತಿದೆ. ಇದರಿಂದಾಗಿಯೇ ಕೆರೆಗಳ ಕೋಡಿ ಒಡೆದಾಗ ಪ್ರವಾಹ ಸೃಷ್ಟಿಯಾಗುತ್ತಿದೆ. ಹಿಂದಿನ ವ್ಯವಸ್ಥೆಯಲ್ಲಾದರೇ ಎಷ್ಟೇ ಹೆಚ್ಚುವರಿ ನೀರಿದ್ದರೂ ಅದು ಬೇರೊಂದು ಕೆರೆಯನ್ನು ಸೇರುತ್ತಿತ್ತು ಎಂದು ಅವರು ವಿವರಿಸಿದರು.

‘ನೀರು ವೇಗವಾಗಿ ಹರಿದಷ್ಟೂ ಅನಾಹುತ ಜಾಸ್ತಿ. ರಾಜಕಾಲುವೆ ತಳದಲ್ಲಿ ಕಾಂಕ್ರೀಟ್‌ ಹಾಕಿದರೆ ನೀರು ವೇಗವಾಗಿ ಹರಿಯುತ್ತದೆ. ಅದರ ಬದಲು ಕಾಲುವೆಯ ತಳದಲ್ಲಿ ನೀರಿಂಗಲು ಅವಕಾಶ ಕಲ್ಪಿಸಬೇಕು. ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶ ಎಂಬುದೇ ಉಳಿದಿಲ್ಲ. ಹರಿಯುವ ನೀರಿನ ವೇಗ ಕಡಿಮೆ ಮಾಡುವಲ್ಲಿ ಹಾಗೂ ಮಾಲಿನ್ಯ ನಿಯಂತ್ರಣದಲ್ಲಿ ಮೀಸಲು ಪ್ರದೇಶಗಳ ಪಾತ್ರವೂ ಮುಖ್ಯ. ರಾಜಕಾಲುವೆಗಳನ್ನು ಪುನರುಜ್ಜೀವನಗೊಳಿಸಿ ಕೆರೆಗಳನ್ನು ಮತ್ತೆ ಒಂದಕ್ಕೊಂದು ಜೊಡಿಸುವ ಕಾರ್ಯ ತುರ್ತಾಗಿ ಆಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಸಮಗ್ರ ಯೋಜನೆ; ಬೇಕಿದೆ ಇಚ್ಛಾಶಕ್ತಿ’

ನಗರದಲ್ಲಿ ನೀರಿನ ನಿರ್ವಹಣೆಗೆ ಸಮಗ್ರ ಯೋಜನೆ ರೂಪಿಸದ ಹೊರತು ಪ್ರವಾಹದಂತಹ ಅನಾಹುತಗಳು ನಡೆಯುತ್ತಲೇ ಇರುತ್ತವೆ ಎಂದು ಎಚ್ಚರಿಸುತ್ತಾರೆ ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌.

‘ಕೆರೆಗಳ ದುಸ್ಥಿತಿಗೆ ಕಾರಣಗಳು ನಮಗೆ ತಿಳಿದಿವೆ. ಮೊದಲು ಅವುಗಳಿಗೆ ಕಶ್ಮಲಯುಕ್ತ ನೀರು ಸೇರುವುದನ್ನು ತಡೆಯಬೇಕು. ಶುದ್ಧೀಕರಿಸದ ಒಂದು ತೊಟ್ಟು ತ್ಯಾಜ್ಯ ನೀರೂ ಕೆರೆ ಸೇರಲು ಬಿಡಬಾರದು. ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರಿನ ಒಟ್ಟು ಪ್ರಮಾಣಕ್ಕೆ ಹೋಲಿಸಿದರೆ ನಮ್ಮಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಪ್ರಮಾಣ ಏನೇನೂ ಸಾಲದು. ಅವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ರಾಜಕಾಲುವೆಗಳಲ್ಲಿ ಮಳೆ ನೀರು ಮಾತರ ಹರಿಯುವಂತಾಗಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು’ ಎಂದರು.

‘ನೀರಿನ ನಿರ್ವಹಣೆಗೆ ಸಮಗ್ರ ಯೋಜನೆ ರೂಪಿಸಿದರೆ ವಿಶ್ವ ಬ್ಯಾಂಕ್‌ ಅಥವಾ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನಂತಹ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತವೆ. ಅವು ಕಾಮಗಾರಿ ಅನುಷ್ಠಾನದ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತವೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಹಾಗಾಗಿ ಈ ಬಗ್ಗೆ ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರ ಮುಂದಾದರೂ ಅಧಿಕಾರಿಗಳು ಅಡ್ಡಗಾಲು ಹಾಕುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈಗ ಬಹುತೇಕ ಕೆರೆಗಳನ್ನು ಬಿಬಿಎಂಪಿ, ಬಿಡಿಎ ನಿರ್ವಹಣೆ ಮಾಡುತ್ತಿವೆ. ಇದು ಸರಿಯಲ್ಲ. ಅವುಗಳ ನಿರ್ವಹಣೆಯ ಹೊಣೆಯನ್ನು ಜಲಮಂಡಳಿಗೆ ವಹಿಸಬೇಕು. ಕೆರೆ ಹಾಳಾದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.