ಬೆಂಗಳೂರು: ಬೆಂಗಳೂರು ಲಿಟೇರಚರ್ ಫೆಸ್ಟ್(ಬಿಎಲ್‌ಎಫ್) ಸಮಿತಿ ಆಯೋಜಿಸುವ ಬೆಂಗಳೂರು ಸಾಹಿತ್ಯೋತ್ಸವದ 12ನೇ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ.
ನಗರದ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಎರಡು (ಡಿ.2 ಮತ್ತು 3) ದಿನ ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಇತಿಹಾಸ, ಪುರಾಣಗಳಿಂದ ಹಿಡಿದು ಕಲೆ, ಸಂಗೀತ, ಸ್ತ್ರೀವಾದ, ಸಿನಿಮಾ, ತಂತ್ರಜ್ಞಾನ, ಆಹಾರ ಮತ್ತು ಕ್ರೀಡಾ ವಿಷಯಗಳು, ಕಥೆ, ಕವಿತೆ, ಸಮಕಾಲೀನ ವಿಚಾರಗಳ ಕುರಿತು, ವಿಚಾರ ಮಂಡನೆ, ಚರ್ಚೆ, ಸಂವಾದಗಳು ನಡೆಯಲಿವೆ. ಹಿಂದಿನ ಆವೃತ್ತಿಗಳಲ್ಲಿದ್ದಂತೆ ಅನುವಾದ, ಭಾರತೀಯ ಭಾಷೆಗಳು ಮತ್ತು ಕವಿತೆಗಳಿಗೆ ಒತ್ತು ನೀಡಲಾಗಿದೆ. ಪ್ರಕಾಶನ ಉದ್ಯಮ, ಮಾಧ್ಯಮ ಮತ್ತು ಆರ್ಥಿಕತೆಯ ಬಗ್ಗೆಯೂ ಚರ್ಚೆಗಳು ನಡೆಯಲಿವೆ.
ಶನಿವಾರ ಬೆಳಿಗ್ಗೆ 9 ಗಂಟೆಗೆ ಐಶ್ವರ್ಯ ವಿದ್ಯಾ ರಘುನಾಥ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದೊಂದಿಗೆ ಸಾಹಿತ್ಯೋತ್ಸವ ಆರಂಭವಾಗಲಿದೆ. ಗಾಯನದಲ್ಲಿ ಸಂದೀಪ್ ರಾಮಚಂದ್ರನ್ ಮತ್ತು ಬಿ.ಸಿ.ಮಂಜುನಾಥ್ ಅವರೊಂದಿಗೆ ಸಾಥ್ ನೀಡಲಿದ್ದಾರೆ. ಸಂಗೀತ ಕಾರ್ಯಕ್ರಮದ ನಂತರ ಭಾರತೀಯ– ಅಮೆರಿಕನ್ ಲೇಖಕ ಅಬ್ರಹಾಂ ವರ್ಗೀಸ್ ಅವರು ಭಾಷಣವಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಅಬ್ರಹಾಂ ಅವರು 'ಪೆನ್ ಮತ್ತು ಸ್ಟೆಥೊಸ್ಕೋಪ್' ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಸಿ.ಎನ್.ರಾಮಚಂದ್ರನ್, ಕೃಷ್ಣಮೂರ್ತಿ ಹನೂರು, ಎಸ್. ದಿವಾಕರ್, ವಸುಧೇಂದ್ರ, ಪತ್ರಕರ್ತರಾದ ಸುಗತ ಶ್ರೀನಿವಾಸರಾಜು, ಕಾದಂಬರಿಕಾರ ಅಮಿತವ ಕುಮಾರ್, ಕವಯಿತ್ರಿ ಅರುಂಧತಿ ಸುಬ್ರಹ್ಮಣಿಯಂ, ರಂಜಿತ್ ಹೊಸಕೋಟೆ ಮತ್ತು ರುತ್ ಪಡೆಲ್, ಮಲಯಾಳಂ ಮತ್ತು ತಮಿಳು ಲೇಖಕ ಪೌಲ್ ಝಚಾರಿಯಾ ಮತ್ತು ಪೆರುಮಾಳ್ ಮುರುಗನ್ ಸೇರಿದಂತೆ ವಿವಿಧ ರಾಜ್ಯ ಹಾಗೂ ದೇಶಗಳ ಖ್ಯಾತ ಸಾಹಿತಿಗಳು, ನಾಟಕಾರರು, ಲೇಖಕರು, ಪತ್ರಕರ್ತರು ಈ ಬಾರಿಯ ಸಾಹಿತ್ಯೋತ್ಸವದ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ಐದು ವೇದಿಕೆಗಳಲ್ಲಿ ಸಾಹಿತ್ಯೋತ್ಸವದ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ ಮೂರು ವೇದಿಕೆಗಳಲ್ಲಿ ಮಕ್ಕಳ ಸಾಹಿತ್ಯೋತ್ಸವವನ್ನೂ ಆಯೋಜಿಸಲಾಗಿದೆ.
ಬೆಂಗಳೂರು ಸಾಹಿತ್ಯೋತ್ಸವದ ಕಾರ್ಯಕ್ರಮಗಳ ಪೂರ್ಣ ವಿವರಕ್ಕಾಗಿ www.bangaloreliteraturefestival.org ಗೆ ಭೇಟಿಕೊಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.