ADVERTISEMENT

‘ಎಡಪಂಥ ಪ್ರತಿಪಾದಿಸುವ ಮೂಲ ರಾಮಾಯಣ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:41 IST
Last Updated 10 ನವೆಂಬರ್ 2019, 19:41 IST

ಬೆಂಗಳೂರು: ಮೂಲ ರಾಮಾಯಣವು ಎಡಪಂಥ ಮತ್ತು ಸಮಾನತೆಯನ್ನು ಪ್ರತಿಪಾದಿಸುತ್ತದೆ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

ಸಾಹಿತ್ಯ ಉತ್ಸವದಲ್ಲಿ ‘ಮೂಲ ರಾಮಾಯಣ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘2 ಸಾವಿರ ವರ್ಷ ಹಳೆಯದಾದ ಮತ್ತು ಸಂಸ್ಕೃತದಲ್ಲಿರುವ ರಾಮಾಯಣ ಒಂದು ಸಮುದಾಯದ ವಶದಲ್ಲೇ ಇತ್ತು. ಆ ಸಮುದಾಯ ತನ್ನ ಇಚ್ಛೆ ಮತ್ತು ಒತ್ತಾಸೆಗಳನ್ನು ಅದರಲ್ಲಿ ತುರುಕುತ್ತಾ ಹೋಯಿತು’ ಎಂದರು.

‘ಮರ್ಯಾದಾ ಪುರುಷೋತ್ತಮ ರಾಮನನ್ನು ದೇವರೆಂದು ಬಿಂಬಿಸಲಾಯಿತು. ಶಂಬೂಕನ ವಧೆಯನ್ನು ರಾಮಾಯಣದಲ್ಲಿ ತೂರಿಸಲಾಯಿತು. ಬೇಟೆಗಾರನಾದ ವಾಲ್ಮೀಕಿ ಮತ್ತು ಕ್ಷತ್ರಿಯನಾದ ವಿಶ್ವಾಮಿತ್ರನನ್ನು ಬ್ರಾಹ್ಮಣ ಎಂದು ತಿರುಚಲಾಯಿತು. ಇದರ ಫಲವಾಗಿ ಇಂದು ರಾಮಾಯಣ ಎಂದರೆ ಮಹಿಳೆಯರು ಮತ್ತು ದಲಿತರ ವಿರೋಧಿ ಎನ್ನುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಮೂಲ ರಾಮಾಯಣವು ಬಲಪಂಥೀಯರು ಚಿತ್ರಿಸಿರುವ ರಾಮಾಯಣಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಪ್ರತ್ಯೇಕತೆಯನ್ನು ಎಲ್ಲಿಯೂ ಪ್ರತಿಪಾದಿಸಿಲ್ಲ. ದುಡಿದು ಬದುಕುವುದು, ಸಮಾನತೆ ಮತ್ತು ಸಹಜೀವನವನ್ನು ಪ್ರತಿಪಾದಿಸಿದೆ’ ಎಂದರು.

‘ಸರಳ ಜೀವನದ ಬಗ್ಗೆಯೂ ಮೂಲ ರಾಮಾಯಣ ಪಾಠ ಮಾಡುತ್ತದೆ. ರಾವಣನ ಹತ್ತು ತಲೆಗಳು ಆಸೆಯನ್ನು ಪ್ರತಿನಿಧಿಸುತ್ತವೆ. ಆ ಆಸೆ ತನ್ನನ್ನೇ ನಾಶ ಮಾಡುತ್ತದೆ ಎಂಬುದಕ್ಕೆ ಆ ‍ಪಾತ್ರವನ್ನು ವಾಲ್ಮೀಕಿ ಉದಾಹರಣೆಯಾಗಿ ನೀಡಿದ್ದಾರೆ’ ಎಂದು ವಿವರಿಸಿದರು.

‘ಮಂದಿರ ಸಮಸಮಾಜದ ಸಂಕೇತ ಆಗಬೇಕು’
‘ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ಸಮಸಮಾಜದ ಸಂಕೇತವಾಗಬೇಕು’ ಎಂದು ಪ್ರಸನ್ನ ಅಭಿಪ್ರಾಯಪಟ್ಟರು.

‘ಮಂದಿರ ನಿರ್ಮಿಸಲು ಅತೀ ಉತ್ಸಾಹ ತೋರುತ್ತಿರುವವನ್ನು ನೋಡಿದರೆ ಸರ್ದಾರ ವಲ್ಲಭಭಾಯಿ ಪಟೇಲರ ಪ್ರತಿಮೆಗೂ ದೊಡ್ಡದಾದ ಭವ್ಯ ಮಂದಿರ ಕಟ್ಟಬಹುದು. ಆದರೆ, ಅದು ಮುಖ್ಯವಲ್ಲ’ ಎಂದರು.

‘ದೇಗುಲಕ್ಕೆ ಪೂಜಾರಿ ಯಾರಿರುತ್ತಾರೆ, ದಲಿತರಿಗೆ ಪ್ರವೇಶ ಇರುತ್ತದೋ ಇಲ್ಲವೋ, ಸೀತೆಯ ಅಡುಗೆ ಮನೆ ಉಳಿಯುತ್ತದೋ, ಇಲ್ಲವೋ ಎಂಬ ಪ್ರಶ್ನೆಗಳು ಈಗ ಎದುರಾಗಿವೆ’ ಎಂದು ಹೇಳಿದರು.

**

ದಲಿತರು, ಶೂದ್ರರು, ರೈತರು ಮತ್ತು ಮಹಿಳೆಯರ ಪರವಾಗಿ ಮೂಲ ರಾಮಾಯಣ ಇದೆ. ಈಗ ನಿರ್ಮಾಣ ಆಗಲಿರುವ ಮಂದಿರ ಈ ನಾಲ್ಕು ಸಮುದಾಯಗಳಿಗೆ ಏನಾದರೂ ಸಹಾಯವಾಗುವಂತೆ ಇರಬೇಕು
–ಪ್ರಸನ್ನ,ರಂಗಕರ್ಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.