ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳೆಂದರೆ ಅದು ಹಾಲಕ್ಕಿ ಸಮುದಾಯ ಎಂದು ಪ್ರಾಧ್ಯಾಪಕ ಡಾ. ಫಾಲ್ಗುಣಗೌಡ ತಿಳಿಸಿದರು.
ಹಾಲಕ್ಕಿ ಕನ್ನಡ ಕುರಿತ ಗೋಷ್ಠಿಯಲ್ಲಿ ‘ಹಾಲಕ್ಕಿ ಸಂಸ್ಕೃತಿ ಮತ್ತು ಭಾಷೆ’ ಕುರಿತು ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಮುದಾಯ ನಮ್ಮದು. ಅಶಿಕ್ಷಿತರು ಮತ್ತು ಮುಗ್ಧರಾಗಿದ್ದ ಸಮುದಾಯದವರಿಂದ ಹೆಬ್ಬೆಟ್ಟಿನ ಸಹಿ ಪಡೆದು ಮೇಲ್ವರ್ಗದವರು ಭೂಮಿ ಕಸಿದುಕೊಂಡರು. ಅವರ ಮನೆಯಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ, ಜೀತದಾಳಾಗಿ ದುಡಿಯಲು ನೇಮಿಸಿಕೊಂಡರು. ವರ್ಷಕ್ಕೊಮ್ಮೆ ಒಂದು ಕಚ್ಚೆ ಮತ್ತು ರುಮಾಲು ಬಿಟ್ಟರೆ ಬೇರೇನನ್ನೂ ನೀಡದೆ ದುಡಿಸಿಕೊಳ್ಳಲಾಗಿದೆ. ಇದೆಲ್ಲವನ್ನೂ ಸಮುದಾಯದವರು ಪದಗಳನ್ನು ಕಟ್ಟಿ ಹಾಡಿದ್ದಾರೆ’ ಎಂದು ಹೇಳಿದರು.
‘ಸಮುದಾಯದವರು 1.60 ಲಕ್ಷ ಜನಸಂಖ್ಯೆ ಹೊಂದಿದ್ದು, ಮಹಿಳೆಯರು ಇಂದಿಗೂ ಕಾಡಿನಿಂದ ಕಟ್ಟಿಗೆ ತಂದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಕಷ್ಟ ಕೊನೆಯಾಗಬೇಕು. ಸಮುದಾಯದ ಜನರನ್ನು ಬಡತನದಿಂದ ಮೇಲೆತ್ತಲು ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ಹಾಲಕ್ಕಿ ಸೊಗಡು ಮತ್ತು ಸಂಸ್ಕೃತಿ ಉಳಿಸುವ ಕೆಲಸ ಆಗಬೇಕು. ವಿಶ್ವವಿದ್ಯಾಲಯಗಳು ಹಾಲಕ್ಕಿ ಸಮುದಾಯದ ಹಾಡು ಮತ್ತು ಕಥೆಗಳನ್ನು ಉಳಿಸಲು ಕಾಳಜಿ ವಹಿಸಬೇಕು’ ಎಂದರು.
‘ಹಾಲಕ್ಕಿ ಮಹಿಳಾ ಸಂಸ್ಕೃತಿ ಮತ್ತು ಭಾಷೆ’ ಕುರಿತು ಮಾತನಾಡಿದ ಕವಯತ್ರಿ ಅಕ್ಷತಾ ಕೃಷ್ಣಮೂರ್ತಿ, ‘ಬುಡಕಟ್ಟು ಸಮುದಾಯಗಳ ಮುಗ್ಧ ಮತ್ತು ನಿರ್ಲಿಪ್ತವಾದ ಜೀವನ ಪ್ರೀತಿಯೇ ವಿಶಿಷ್ಟವಾದುದು.ಕಡು ಬಡತನದಲ್ಲೇ ಹುಟ್ಟಿ ಬೆಳೆವ ಅವರು ಬದುಕಿನ ಎಲ್ಲ ಸವಾಲುಗಳನ್ನು ಬದಿಗೊತ್ತಿ ಜಾನಪದ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಬೇರುಗಳನ್ನು ವಿಶ್ವಮಟ್ಟದಲ್ಲಿ ಗುರುತಿಸಲು ಹಾಲಕ್ಕಿ ಮಹಿಳಾ ಹಾಡುಗಾರರು ಪ್ರಮುಖ ಕೊಡುಗೆ ನೀಡಿದ್ದಾರೆ. ಸುಕ್ರಿ ಬೊಮ್ಮಗೌಡ ಮತ್ತು ತುಳಸಿ ಗೋವಿಂದಗೌಡ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿರುವುದೇ ಇದಕ್ಕೆ ಸಾಕ್ಷಿ. ಇವರಿಬ್ಬರಲ್ಲದೆ ಹಾಲಕ್ಕಿ ಜನಪದ ಮತ್ತು ಕನ್ನಡ ಭಾಷೆ ಉಳಿಸಿ ಬೆಳೆಸುತ್ತಿರುವ ಹಲವು ಮಹಿಳೆಯರಿದ್ದಾರೆ’ ಎಂದು ವಿವರಿಸಿದರು.
‘ಬಹುತ್ವ ನಿಭಾಯಿಸುವ ಸಾಹಿತ್ಯ ಅವಶ್ಯ’
‘ಪೂರ್ಣಚಂದ್ರ ತೇಜಸ್ವಿ ಅವರ ಬರಹದಲ್ಲಿ ಕಾಣಿಸುವಂತೆ ಪರಿಸರದ ಸಮಗ್ರ ಜ್ಞಾನ ಇರುವುದು ಸಮಾಜದ ಅತೀ ಅಂಚಿನಲ್ಲಿರುವ ವ್ಯಕ್ತಿಗಳಲ್ಲಿ. ಅಲ್ಲದೆ, ಈ ಪರಿಸರ ಜ್ಞಾನವು ಸ್ಥಳೀಯವಾದ ಭಾಷೆ ಮತ್ತು ನುಡಿಗಟ್ಟಿನಲ್ಲಿ ಇರುತ್ತದೆ’ ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
‘ಸಕಲ ಜೀವಾತ್ಮಗಳ ಲೇಸನ್ನೇ ಬಯಸುತ್ತಾ’ ಎಂಬ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯ ಮತ್ತು ಪರಿಸರ ಪ್ರಜ್ಞೆ’ ಕುರಿತು ಅವರು ಮಾತನಾಡಿದರು.
‘ಇವುಗಳಿಗೆ ಕನ್ನಡದ ಪ್ರಧಾನಧಾರೆಯ ಸಾಹಿತ್ಯ ಸಮಪರ್ಕವಾದ ಅವಕಾಶ ಕೊಟ್ಟಿಲ್ಲವಾದ್ದರಿಂದ ನಮ್ಮ ಪರಿಸರ ಪ್ರಜ್ಞೆ ಅಸಮಗ್ರವಾಗಿಯೇ ಉಳಿದಿದೆ’ ಎಂದರು.
‘ಕರ್ನಾಟಕದ ಬಹುಭಾಷಿಕತ್ವಕ್ಕೆ ಸಮಾನವಾದ ಬಹುತ್ವವು ನಮ್ಮ ನಾಡಿನ ಪರಿಸರದಲ್ಲೂ ಇದೆ. ಹೀಗಾಗಿ, ಈ ಎರಡೂ ಬಹುತ್ವಗಳನ್ನು ನಿಭಾಯಿಸುವ ಸಾಹಿತ್ಯದ ಅವಶ್ಯಕತೆ ಇದೆ’ ಎಂದು ಅವರು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.