ಬೆಂಗಳೂರು: ‘ಸಾವರ್ಕರ್ ಅವರ ಇಡೀ ಜೀವನ ಬಹಳ ವಿರೋಧಾಭಾಸಗಳಿಂದ ಕೂಡಿತ್ತು’ ಎಂದು ‘ಸಾವರ್ಕರ್– ದಿ ಸ್ಟೋರಿ ಆಫ್ ದಿ ಫಾದರ್ ಆಫ್ ಹಿಂದುತ್ವ’ ಕೃತಿಯ ಲೇಖಕ ವೈಭವ್ ಪುರಂದರೆ ಅಭಿಪ್ರಾಯಪಟ್ಟರು.
ಈ ಕೃತಿಯ ಕುರಿತು ವೈಭವ್ ಮತ್ತು ಗೋಷ್ಠಿಯ ಸಮನ್ವಯಕಾರ ವರ್ಗೀಸ್ ಕೆ. ಜಾರ್ಜ್ ನಡುವೆ ಬಿರುಸಿನ ಚರ್ಚೆ ನಡೆಯಿತು. ಅವರ ನಡುವಿನ ಸಂವಾದ ಇಂತಿದೆ.
ವೈಭವ್: ಸಾವರ್ಕರ್ ಜೀವನವನ್ನು ಎರಡು ವಿಭಾಗದಲ್ಲಿ ವಿಂಗಡಿಸಬಹುದು. ಅವರ ಜೀವನದ ಮೊದಲಾರ್ಧ ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿಂದೂ–ಮುಸ್ಲಿಂ ಏಕತೆಯ ಪ್ರತಿಪಾದಕರಾಗಿದ್ದರು. ದ್ವಿತೀಯಾರ್ಧ, ಹಿಂದುತ್ವದ ಪ್ರತಿಪಾದಕ ಅಥವಾ ಮುಸ್ಲಿಂ ವಿರೋಧಿಯಾದರು.
ವರ್ಗೀಸ್: ಅವರು ಮುಸ್ಲಿಂ ವಿರೋಧಿಯಾಗಿ ಪರಿವರ್ತನೆಯಾಗಲು ಕಾರಣವೇನು?
ವೈಭವ್: ಅಂಡಮಾನ್ ಜೈಲಿನಲ್ಲಿ ಹಿಂದೂ ಕೈದಿಗಳಿಗೆ ಮುಸ್ಲಿಂ ಜೈಲರ್ ಅನ್ನು ನೇಮಿಸಲಾಗುತ್ತಿತ್ತು. ಅವರು ಕೈದಿಗಳನ್ನು ಬಹಳ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದರು. ಜೈಲಿನಲ್ಲಿನ ಅವರ ಕೆಟ್ಟ ಅನುಭವದಿಂದಾಗಿಯೇ ಅವರೊಬ್ಬ ಹಿಂದುತ್ವ ಪ್ರತಿಪಾದಕರಾಗಿ ಬದಲಾದರು.
ವರ್ಗೀಸ್: ಹಾಗಾದರೆ, ತಿಲಕರೂ ಸಹ ಜೈಲುವಾಸ ಅನುಭವಿಸಿದ್ದಾರೆ. ಅವರು ಜೈಲಿನಿಂದ ಹೊರಬಂದಾಗ ಹಿಂದೂ– ಮುಸ್ಲಿಂ ಏಕತೆಯ ಬಗ್ಗೆ ಮಾತನಾಡಿದ್ದಾರಲ್ಲಾ.
ವೈಭವ್: ತಿಲಕರು ಹಾಗೂ ಸಾವರ್ಕರ್ ನಡುವೆ ಹಲವು ವ್ಯತ್ಯಾಸಗಳಿವೆ. ಇಬ್ಬರ ಹಾದಿಯೂ ಬೇರೆಯದೇ ಆಗಿತ್ತು. ಮುಸ್ಲಿಮರನ್ನು ಹೊರಗಿಟ್ಟು, ದೇಶ ಕಟ್ಟಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ತಿಲಕರದ್ದಾಗಿತ್ತು. ಜೈಲಿನಲ್ಲಿ ಸಾವರ್ಕರ್ ಅನುಭವ ಬೇರೆಯದೇ ಆಗಿತ್ತು. ವೈಯಕ್ತಿಕವಾಗಿ ಹಾಗೂ ರಾಜಕೀಯ ನೆಲೆಯಲ್ಲಿ ಅವರ ಅಭಿಪ್ರಾಯಗಳು ಇದರಿಂದಾಗಿಯೇ ಬದಲಾದವು.
ವರ್ಗೀಸ್: ಸಾವರ್ಕರ್ ಏಳು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದಾರೆ. ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ‘ಸ್ವಾತಂತ್ರ್ಯಕ್ಕಾಗಿ ಇನ್ನಷ್ಟು ಬಲಿದಾನವಾಗಬೇಕು’ ಎನ್ನುತ್ತಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ?
ವೈಭವ್: ಸಾವರ್ಕರ್ ಕ್ಷಮಾಪಣಾ ಪತ್ರಗಳನ್ನು ಬರೆದಿದ್ದು ಹೌದು. ಭಗತ್ ಸಿಂಗ್ ಹಾಗೂ ಸಾವರ್ಕರ್ ಅವರ ಸಂದರ್ಭಗಳು ಎರಡೂ ವಿಭಿನ್ನ. ಸಾವರ್ಕರ್ ಹೋರಾಟದಲ್ಲಿ ಸೈನಿಕರಾಗಿರಲಿಲ್ಲ. ಬದಲಿಗೆ ನಾಯಕರಾಗಿದ್ದರು. ಹೋರಾಟ ಮುಂದುವರಿಸುವ ಹೊಣೆ ಅವರ ಮೇಲಿತ್ತು. ಇಲ್ಲಿಂದ ತಪ್ಪಿಸಿಕೊಂಡು ದೇಶಕ್ಕೆ ಮರಳಿ ಹೋರಾಟ ಮುಂದುವರಿಸಬೇಕಿತ್ತು. ಬ್ರಿಟಿಷರಿಗೆ ಏನು ಬರೆದುಕೊಡಬೇಕೊ ಬರೆದುಕೊಡಿ, ದೇಶಕ್ಕೆ ಮರಳಿ ಮಾಡಬೇಕಾದ ಕೆಲಸವಿದೆ ಎಂದು ತಮ್ಮ ಸಹ ಕೈದಿಗಳಿಗೂ ಹೇಳುತ್ತಿದ್ದರು.
*
ಹಿಂದೂಗಳನ್ನು ನೋಯಿಸುವ ಉದ್ದೇಶದಿಂದ ಮಾಡುವ ಗೋಹತ್ಯೆಯನ್ನು ಸಾವರ್ಕರ್ ವಿರೋಧಿಸುತ್ತಿದ್ದರು. ಆದರೆ, ಗೋಮಾಂಸ ತಿನ್ನುವುದನ್ನು ಅವರು ವಿರೋಧಿಸುತ್ತಿರಲಿಲ್ಲ.
-ವೈಭವ್ ಪುರಂದರೆ, ಲೇಖಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.