ಬೆಂಗಳೂರು: ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾಧ್ಯಾಪಕರೊಬ್ಬರ ಕಾರು ಅಪಘಾತವಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ತೀವ್ರ ಗಾಯಗೊಂಡಿದ್ದಾರೆ.
‘ಪ್ರಾಧ್ಯಾಪಕ ನಾಗರಾಜ್ ಅವರು ತಮ್ಮ ಕಾರನ್ನು ಅತೀ ವೇಗವಾಗಿ ನಿರ್ಲಕ್ಷ್ಯದಿಂದ ಚಲಾಯಿಸಿದ್ದರು. ನಿಯಂತ್ರಣ ತಪ್ಪಿದ್ದ ಕಾರು, ನಡೆದುಕೊಂಡು ಹೊರಟಿದ್ದ ಬಿ.ಕಾಂ ವಿದ್ಯಾರ್ಥಿಗಳಾದ ಅಶ್ವಿನಿ, ನಂದುಪ್ರಿಯಾ ಹಾಗೂ ಸಂಗೀತ ವಿಷಯದ ಶಿಕ್ಷಕಿ ಜ್ಯೋತಿ ಅವರಿಗೆ ಗುದ್ದಿತ್ತು. ನಂತರ, ಮತ್ತೊಂದು ಕಾರಿಗೆ ಗುದ್ದಿ ಮರಕ್ಕೆ ಡಿಕ್ಕಿ ಹೊಡೆದು ನಿಂತುಕೊಂಡಿತ್ತು’ ಎಂದು ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಶನಿವಾರ ಬೆಳಿಗ್ಗೆ 9.35ರ ಸುಮಾರಿಗೆ ಅಪಘಾತ ಸಂಭವಿಸಿದೆ. ಗಾಯಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.
‘ಗಂಗಾವತಿಯ ಅಶ್ವಿನಿ, ಆರ್.ಟಿ. ನಗರದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದರು. ಇವರ ಸ್ಥಿತಿ ಚಿಂತಾಜನಕವಾಗಿದೆ. ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.