ADVERTISEMENT

ಬೆಂಗಳೂರು: ಮೈಸೂರು ರಸ್ತೆಗೆ ನೈಸ್‌ ಲಿಂಕ್‌ ರಸ್ತೆ ಜೋಡಣೆ

ಬಿಎಚ್‌ಇಎಲ್‌–ದೀಪಾಂಜಲಿನಗರ ಜಂಕ್ಷನ್‌ನಲ್ಲಿ ವಾಹನದಟ್ಟಣೆಯ ಆತಂಕ; ಜಂಕ್ಷನ್‌ ಅಭಿವೃದ್ಧಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:09 IST
Last Updated 29 ಜೂನ್ 2024, 16:09 IST
ಮೈಸೂರು ರಸ್ತೆಯ ಬಿಎಚ್‌ಇಎಲ್‌ ಜಂಕ್ಷನ್‌ ಸಮೀಪ ನೈಸ್‌ ಲಿಂಕ್‌ ರಸ್ತೆ ಕಾಮಗಾರಿ  ನಡೆಯುತ್ತಿದೆ
ಪ್ರಜಾವಾಣಿ ಚಿತ್ರ.
ಮೈಸೂರು ರಸ್ತೆಯ ಬಿಎಚ್‌ಇಎಲ್‌ ಜಂಕ್ಷನ್‌ ಸಮೀಪ ನೈಸ್‌ ಲಿಂಕ್‌ ರಸ್ತೆ ಕಾಮಗಾರಿ  ನಡೆಯುತ್ತಿದೆ ಪ್ರಜಾವಾಣಿ ಚಿತ್ರ.   

ಬೆಂಗಳೂರು: ಮೈಸೂರು ರಸ್ತೆಯ ಬಿಎಚ್‌ಇಎಲ್‌ ಜಂಕ್ಷನ್‌ನಲ್ಲಿ ನೈಸ್‌ ರಸ್ತೆಯ ಲಿಂಕ್‌ ರಸ್ತೆ ಜೋಡಣೆ ಕಾರ್ಯ ಆರಂಭವಾಗಿದೆ. ರಸ್ತೆ ವಿನ್ಯಾಸ ನಕ್ಷೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣದ ವಿಷಯವಾಗಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಲಿಂಕ್‌ ರಸ್ತೆಯ ಕಾಮಗಾರಿಗೆ ನೈಸ್‌ ಸಂಸ್ಥೆ ಕಳೆದವಾರ ಚಾಲನೆ ನೀಡಿದೆ. ನ್ಯಾಯಾಲಯದಲ್ಲಿ ಕಾಮಗಾರಿಗೆ ಅನುಮತಿ ಸಿಕ್ಕಿರುವುದರಿಂದ ಕಾಮಗಾರಿ ಆರಂಭಿಸಲಾಗಿದೆ. ನೈಸ್‌ ಲಿಂಕ್‌ ರಸ್ತೆ ಇಲ್ಲಿ ತೆರೆದುಕೊಂಡರೆ, ವಾಹನ ಸಂಚಾರ ಹೆಚ್ಚಾಗುತ್ತದೆ. ದಟ್ಟಣೆಯ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಬಿಎಚ್‌ಇಎಲ್‌ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಬಿಬಿಎಂಪಿ ಸದ್ಯಕ್ಕೆ ಸ್ಥಗಿತಗೊಳಿಸಿದೆ.

ಬಿಎಚ್‌ಇಎಲ್‌ ಜಂಕ್ಷನ್‌ನಲ್ಲಿ ಈಗಾಗಲೇ ನಿತ್ಯವೂ ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೂ ವಾಹನ ದಟ್ಟಣೆ ಉಂಟಾಗುತ್ತಿದೆ. ಇನ್ನು ನೈಸ್‌ ಲಿಂಕ್‌ ರಸ್ತೆಯೂ ಇಲ್ಲಿ ತೆರೆದುಕೊಂಡು, ವಾಹನಗಳ ಆಗಮನ–ನಿರ್ಗಮನಕ್ಕೆ ಅನುವಾದರೆ ಜಂಕ್ಷನ್‌ನಲ್ಲಿ ವಾಹನದಟ್ಟಣೆ ಅತಿಯಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಿಬಿಎಂಪಿ ಬಿಎಚ್‌ಇಎಲ್‌ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿಯನ್ನು ನಡೆಸುತ್ತಿದ್ದು, ಇದರಿಂದ ರಸ್ತೆ ವಿಸ್ತೀರ್ಣ ಒಂದಷ್ಟು ಕಡಿಮೆಯಾಗಿದೆ. ನೈಸ್‌ ರಸ್ತೆಯೂ ಬಂದರೆ ಸಮಸ್ಯೆಯಾಗುತ್ತದೆ ಎಂಬುದನ್ನು ಅರಿತಿರುವ ಪಾಲಿಕೆ ಎಂಜಿನಿಯರ್‌ಗಳು, ಈ ಬಗ್ಗೆ ಕ್ರಮ ಕೈಗೊಳ್ಳಲು ರಸ್ತೆ ಮೂಲಸೌಕರ್ಯದ ಮುಖ್ಯ ಎಂಜಿನಿಯರ್‌ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಜಂಕ್ಷನ್‌ ಮಧ್ಯಭಾಗದಲ್ಲಿ ಕಾರ್ಯನಿರ್ವಹಿಸದಂತೆ ಸೂಚನೆ ಬಂದಿದೆ. ಹೀಗಾಗಿ ಬಿಬಿಎಂಪಿ ಕಾಮಗಾರಿಯನ್ನು ಬಹುತೇಕ ಸ್ಥಗಿತಗೊಳಿಸಿದೆ.

ನಾಯಂಡಹಳ್ಳಿ ಕಡೆಯಿಂದ ಮೈಸೂರು ರಸ್ತೆಯಲ್ಲಿ ಬಿಎಚ್‌ಇಎಲ್‌ ಜಂಕ್ಷನ್‌ ಮೂಲಕ ಮೇಲ್ಸೇತುವೆಯಿಂದ ಗಾಳಿ ಆಂಜನೇಯ ದೇವಸ್ಥಾನದವರೆಗೆ ಏಕಮುಖ ಸಂಚಾರವಿದೆ. ಗಾಳಿ ಆಂಜನೇಯ ದೇವಸ್ಥಾನದಿಂದ ಬಿಎಚ್‌ಇಎಲ್‌ ಜಂಕ್ಷನ್‌ವರೆಗೂ ಏಕಮುಖ ಸಂಚಾರವಿದೆ. ಆದರೆ, ದೀಪಾಂಜಲಿ ನಗರದ ಕಡೆಗೆ ಹೋಗುವಾಗ ಎರಡೂ ಬದಿಯ ವಾಹನಗಳು ಜಂಕ್ಷನ್‌ನಲ್ಲಿ ಒಂದೆಡೆ ಸೇರುವುದರಿಂದ ಇಲ್ಲಿ ಅತಿಹೆಚ್ಚಿನ ದಟ್ಟಣೆ ಉಂಟಾಗುತ್ತಿದೆ. ಅಲ್ಲದೆ, ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ಉಂಟಾಗುವ ವಾಹನ ದಟ್ಟಣೆಯಿಂದ ಎರಡೂ ಏಕಮುಖ ರಸ್ತೆಗಳಲ್ಲಿ ವಾಹನಗಳು ನಿಲ್ಲುತ್ತಿವೆ. ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ ಆರಂಭವಾದ ನಂತರ ಸಮಸ್ಯೆ ಇನ್ನೂ ಹೆಚ್ಚಾಗಿತ್ತು. ಇದನ್ನು ನಿಯಂತ್ರಿಸಲು ಸಂಚಾರ ಪೊಲೀಸರನ್ನು ಇತ್ತೀಚೆಗೆ ನಿಯೋಜಿಸಲಾಗಿದೆ.

ಬಿಎಚ್‌ಇಎಲ್‌ ಜಂಕ್ಷನ್‌ನಲ್ಲೇ ನೈಸ್ ಲಿಂಕ್‌ ರಸ್ತೆ ಆರಂಭವಾದರೆ ಉಲ್ಬಣಿಸುವ ಸಮಸ್ಯೆಯನ್ನು ನಿಯಂತ್ರಿಸುವ ಬಗ್ಗೆ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರು ಯೋಜನೆ ರೂಪಿಸುತ್ತಿದ್ದಾರೆ. 

ಕ್ರಮವಿಲ್ಲ: ‘ಬಿಎಚ್‌ಇಎಲ್‌ ಜಂಕ್ಷನ್‌, ಗಾಳಿ ಆಂಜನೇಯ ದೇವಸ್ಥಾನ, ಸ್ಯಾಟಲೈಟ್‌ ಬಸ್‌ ನಿಲ್ದಾಣ ಬಳಿ ನಿತ್ಯವೂ ವಾಹನ ದಟ್ಟಣೆ ಉಂಟಾಗುತ್ತಲೇ ಇದೆ. ಸಂಚಾರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದೀಪಾಂಜಲಿನಗರ ನಮ್ಮ ಮೆಟ್ರೊ ನಿಲ್ದಾಣ ಕೆಳಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಹಾಳಾಗಿದೆ. ಇದರಿಂದ ಸಮಸ್ಯೆಗಳು ಹೆಚ್ಚಾಗಿವೆ’ ಎಂದು ವಾಹನ ಸವಾರ ಜಗದೀಶ್‌ ದೂರಿದರು.

ದಟ್ಟಣೆಯಾಗದಂತೆ ಕ್ರಮ: ಅನುಚೇತ್

‘ಮೈಸೂರು ರಸ್ತೆಗೆ ನೈಸ್‌ ಲಿಂಕ್‌ ರಸ್ತೆಯನ್ನು ಇನ್ನೂ ಜೋಡಣೆ ಮಾಡಿಲ್ಲ ಕಾಮಗಾರಿ ನಡೆಯುತ್ತಿದೆ. ವಾಹನ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ನಗರ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.