ADVERTISEMENT

ಬೆಂಗಳೂರಿಗೆ ನೀರು ಬೇಕೆ? ಕೊಡಗಿನಲ್ಲಿ ಭೂಪರಿವರ್ತನೆ ನಿಲ್ಲಿಸಿ: ಸಿ.ಪಿ.ಮುತ್ತಣ್ಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 23:55 IST
Last Updated 20 ಮಾರ್ಚ್ 2024, 23:55 IST
<div class="paragraphs"><p>ಕರ್ನಲ್ ಸಿ.ಪಿ.ಮುತ್ತಣ್ಣ</p></div>

ಕರ್ನಲ್ ಸಿ.ಪಿ.ಮುತ್ತಣ್ಣ

   

ಮಡಿಕೇರಿ: ‘ಬೆಂಗಳೂರಿಗೆ ನೀರು ಬೇಕೆ? ಕೊಡಗಿನಲ್ಲಿ ಭೂಪರಿವರ್ತನೆ ನಿಲ್ಲಿಸಿ’ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ಕರ್ನಲ್ ಸಿ.ಪಿ.ಮುತ್ತಣ್ಣ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಕುಡಿಯುವ ನೀರಿನ ಸಮಸ್ಯೆಗೂ ಕೊಡಗಿನಲ್ಲಿ ನಡೆಯುತ್ತಿರುವ ಭೂಪರಿವರ್ತನೆಗಳಿಗೂ ನೇರವಾದ ಸಂಬಂಧವಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಕೊಡಗಿನ ಕಾಫಿ ತೋಟಗಳು, ಭತ್ತದ ಗದ್ದೆಗಳಲ್ಲಿ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು, ತೋಟಗಳಲ್ಲಿ ಹರಿಯುತ್ತಿದ್ದ ಸಣ್ಣ ತೊರೆಗಳು ನಾಶವಾಗುತ್ತಿವೆ. ತೊರೆಗಳು ಸೇರುತ್ತಿದ್ದ ಕಾವೇರಿ ನದಿಯಲ್ಲಿ ಸಹಜವಾಗಿಯೇ ನೀರು ಕಡಿಮೆಯಾಗುತ್ತಿದೆ. ಕೂಡಲೇ ಕೊಡಗಿನಲ್ಲಿ ನಗರೀಕರಣವನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.

‘ರಿಯಲ್ ಎಸ್ಟೇಟ್ ವ್ಯವಹಾರವನ್ನು ಕೊಡಗಿನಾಚೆಗೆ ನಡೆಸಲಿ. ಇಲ್ಲಿ ಉಪನಗರ, ಮಹಾನಗರಗಳು ನಿರ್ಮಾಣವಾದರೆ ಬೆಂಗಳೂರಿಗೆ ಮಾತ್ರವಲ್ಲ ಮೈಸೂರಿಗೂ ಕುಡಿಯಲು ನೀರು ಕೊಡಲಾರದ ಸ್ಥಿತಿ ಬರಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಹೊಸ ಬಡಾವಣೆಗಳಿಗೆ ‌ನಿರಾಕ್ಷೇಪಣಾ ಪತ್ರಗಳನ್ನು ನೀಡಬಾರದು ಎಂದು ಕೊಡಗಿನಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡುತ್ತೇವೆ. ಸರ್ಕಾರವೂ ಕೂಡಲೇ ಕೊಡಗಿನಲ್ಲಿ ಭೂಪರಿವರ್ತನೆಗಳನ್ನು ತಡೆಯಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.