ADVERTISEMENT

ಬೆಂಗಳೂರು | ರಸ್ತೆ ಗುಂಡಿ ಅಪಘಾತ: ₹7.5 ಲಕ್ಷ ಆಸ್ಪತ್ರೆ ವೆಚ್ಚ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 20:48 IST
Last Updated 7 ನವೆಂಬರ್ 2022, 20:48 IST

ಬೆಂಗಳೂರು: ರಸ್ತೆ ಅಪಘಾತಕ್ಕೆ ಈಡಾಗಿದ್ದ ನಗರದ ಮಹಿಳೆ 15 ದಿನಗಳ ಆಸ್ಪತ್ರೆ ಚಿಕಿತ್ಸೆಗೆ ₹ 7.5 ಲಕ್ಷ ಶುಲ್ಕ ಭರಿಸಬೇಕಾಗಿ ಬಂದಿದ್ದೇ ಅಲ್ಲದೆ, ಆರು ವಾರ ವಿಶ್ರಾಂತಿ ಪಡೆಯಬೇಕಾದ ಸ್ಥಿತಿ ತಲುಪಿದ್ದಾರೆ.

‍ಪೀಣ್ಯ 2ನೇ ಹಂತದ ನಿವಾಸಿ ಎಸ್‌.ಸುಗುಣ ಅಕ್ಟೋಬರ್‌ 16ರಂದು ನಂದಿನಿ ಲೇಔಟ್‌ನಿಂದ ಮರಳುತ್ತಿದ್ದಾಗ, ತಮ್ಮ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿನ 14ನೇ ಕ್ರಾಸ್‌ನಲ್ಲಿ ದೊಡ್ಡ ರಸ್ತೆಗುಂಡಿಗೆ ದ್ವಿಚಕ್ರ ವಾಹನದ ಚಕ್ರ ಇಳಿದಿದ್ದರಿಂದ ಆಯತಪ್ಪಿ ಬಿದ್ದಿದ್ದರು. ರಸ್ತೆಗುಂಡಿಯಲ್ಲಿ ಮಳೆನೀರು ತುಂಬಿದ್ದರಿಂದ ಅವರಿಗೆ ಗುಂಡಿಯ ಆಳ ಎಷ್ಟಿದೆ ಎನ್ನುವುದು ಗೊತ್ತಾಗಿರಲಿಲ್ಲ.

‘ನನ್ನ ಹೆಂಡತಿಯು ನಾಲ್ಕು ವರ್ಷಗಳಿಂದ ಮನೆ ಹಾಗೂ ಕಚೇರಿಯ ನಡುವೆ ಓಡಾಡಲು ದ್ವಿಚಕ್ರವಾಹನ ಬಳಸುತ್ತಿದ್ದಳು. ಅವಳು ನಿಧಾನಕ್ಕೆ ಗಾಡಿ ಓಡಿಸುತ್ತಿದ್ದರೂ ರಸ್ತೆ ಗುಂಡಿ ಆಳವಿದ್ದಿದ್ದರಿಂದ ಆಯತಪ್ಪಿ ಬಿದ್ದಳು. ಆರೋಗ್ಯ ವಿಮೆ ಮಾಡಿಸಿದ್ದರಿಂದ ತಕ್ಷಣಕ್ಕೆ ₹ 5.6 ಲಕ್ಷ ಸಿಕ್ಕಿತು. ಉಳಿದ ₹ 2 ಲಕ್ಷವನ್ನು ಹೊಂದಿಸಬೇಕಾಯಿತು. ಇನ್ನೂ ಆರು ವಾರ ಅವಳಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದು, ಫಿಸಿಯೊಥೆರಪಿ ಮಾಡಿಸಬೇಕಿದೆ’ ಎಂದು ಸುಗುಣ ಅವರ ಪತಿ ಮಹೇಶ್ ತಿಳಿಸಿದರು.

ADVERTISEMENT

‘ಮನೆಯಲ್ಲಿ ಆರು ವರ್ಷದ ಮಗ ಇದ್ದಾನೆ. ವಯಸ್ಸಾದ ತಾಯಿ ಕೂಡ ಇರುವರು. ಅಪಘಾತವಾದ ನಂತರ ಪೊಲೀಸ್ ಠಾಣೆಗೆ ಹೋಗಿ ರಸ್ತೆಗುಂಡಿಯ ಕಾರಣಕ್ಕೇ ಅಪಘಾತವಾಯಿತು ಎಂದು ತಿಳಿಸಿದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಮಳೆ ಬರುವಾಗ ಇನ್ನು ಮುಂದೆ ದ್ವಿಚಕ್ರವಾಹನ ಓಡಿಸಕೂಡದು ಎಂದು ತೀರ್ಮಾನಿಸಿದ್ದೇನೆ’ ಎಂದು ಅವರು ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.