ADVERTISEMENT

ಬೆಂ. ಗ್ರಾಮಾಂತರದ ಫಲಿತಾಂಶ ನನ್ನ ವೈಯಕ್ತಿಕ ಸೋಲು: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 9:19 IST
Last Updated 7 ಜೂನ್ 2024, 9:19 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನನ್ನ ತಮ್ಮ ಡಿ.ಕೆ. ಸುರೇಶ್‌ ಸೋಲು ನನ್ನ ವೈಯಕ್ತಿಕ ಸೋಲು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ʼಬೆಂಗಳೂರು ಗ್ರಾಮಾಂತರದ ಚುನಾವಣೆಯ ವಿಷಯದಲ್ಲಿ ನಾನು ಅತಿಯಾದ ಆತ್ಮವಿಶ್ವಾಸದಲ್ಲಿದ್ದೆ. ಅದು ಹುಸಿಯಾಗಿದೆ. ಈ ರೀತಿಯ ಸೋಲು ನಿರೀಕ್ಷಿಸಿರಲಿಲ್ಲʼ ಎಂದರು.

ʼಬಿಜೆಪಿ ಹಾಗೂ ಜೆಡಿಎಸ್‌ನವರು ಒಳ್ಳೆಯ ತಂತ್ರಗಾರಿಕೆ ಮಾಡಿದರು. ಜೆಡಿಎಸ್‌ ಬದಲಾಗಿ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಸಿದ ಅವರ ತಂತ್ರಗಾರಿಕೆ ಫಲಿಸಿದೆ. ನಮಗೆ ಮಾಗಡಿ ಮತ್ತು ರಾಮನಗರದಲ್ಲಿ ಒಳ್ಳೆಯ ಮುನ್ನಡೆ ಸಿಕ್ಕಿದೆ. ಕನಕಪುರದಲ್ಲಿ 60,000 ಮತಗಳ ಮುನ್ನಡೆ ನಿರೀಕ್ಷಿಸಿದ್ದೆ. ಆದರೆ, 20,000 ಮತಗಳ ಮುನ್ನಡೆ ಮಾತ್ರ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿಗೆ ಬೆಂಗಳೂರು ದಕ್ಷಿಣ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಒಳ್ಳೆಯ ಮುನ್ನಡೆ ಸಿಕ್ಕಿದೆ. ಹೀಗಾಗಿ ಅವರು ಗೆದ್ದರುʼ ಎಂದು ಹೇಳಿದರು.

ADVERTISEMENT

ʼಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸುರೇಶ್‌ ಸ್ಪರ್ಧೆಯ ಬಗ್ಗೆ ಗೊತ್ತಿಲ್ಲ. ಲೋಕಸಭಾ ಚುನಾವಣೆಯ ಸೋಲಿನ ದುಃಖದಿಂದ ಇನ್ನೂ ಹೊರಬಂದಿಲ್ಲ. ನಾನು ಇನ್ನೂ ನಿದ್ದೆಯ ಮೂಡ್‌ನಲ್ಲೇ ಇದ್ದೇನೆʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.