ADVERTISEMENT

ಬೆಂಗಳೂರು: ತಂದೆಗೆ ಮೂತ್ರಪಿಂಡ ದಾನ ಮಾಡಿದ ಪುತ್ರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:43 IST
Last Updated 22 ನವೆಂಬರ್ 2024, 15:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಗೆ ಮಗನೇ ಒಂದು ಮೂತ್ರಪಿಂಡವನ್ನು ದಾನ ಮಾಡಿದ್ದು, ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ರೋಬೊಟ್ ತಂತ್ರಜ್ಞಾನದ ನೆರವಿನಿಂದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಈ ಪ್ರಕರಣದ ಕುರಿತು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ರೋಬೊಟಿಕ್ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಡಾ.ಮೋಹನ್ ಕೇಶವಮೂರ್ತಿ, ‘ಆಫ್ರಿಕಾದ ಬೆನ್ಸನ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, 6-7 ತಿಂಗಳಿಂದ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಗೆ ಒಳಗಾಗಿದ್ದರು. ಇವರು 130 ಕೆ.ಜಿ. ತೂಕ ಹೊಂದಿದ್ದರಿಂದ ಸ್ಥೂಲಕಾಯ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಮೂತ್ರಪಿಂಡದ ಕಾರ್ಯನಿರ್ವಹಣೆಗೆ ನಿಯಮಿತವಾಗಿ ಹಿಮೋಡಯಾಲಿಸಿಸ್‌ ಅವಲಂಬಿಸಿದ್ದರು. ಅಧಿಕ ರಕ್ತದೊತ್ತಡವು ಇವರ ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು’ ಎಂದು ತಿಳಿಸಿದರು.

ADVERTISEMENT

‘ಸ್ಥೂಲಕಾಯದ ಕಾರಣ ಮೂತ್ರಪಿಂಡದ ಕಸಿ ಅಸಾಧ್ಯವೆಂದು ಹಲವು ಆಸ್ಪತ್ರೆಗಳು ನಿರಾಕರಿಸಿದ್ದವು. ಫೋರ್ಟಿಸ್ ಆಸ್ಪತ್ರೆಗೆ ಬಂದ ಬಳಿಕ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನ ನಡೆಸಿ, ಅವರಿಗೆ ರೊಬೋಟ್ ತಂತ್ರಜ್ಞಾನದ ನೆರವಿನಿಂದ ಮಾತ್ರ ಮೂತ್ರಪಿಂಡದ ಕಸಿ ಸಾಧ್ಯವೆಂದು ನಿರ್ಧರಿಸಲಾಯಿತು. ಅವರ 23 ವರ್ಷದ ಮಗ ತನ್ನ ಮೂತ್ರಪಿಂಡವನ್ನೇ ದಾನ ಮಾಡಲು ಮುಂದಾದರು. ತಂದೆ ಹಾಗೂ ಮಗನ ಮೂತ್ರಪಿಂಡ ಹೊಂದಾಣಿಕೆಯಾದ ಕಾರಣ ರೊಬೋಟ್ ತಂತ್ರಜ್ಞಾನದ ಸಹಾಯದಿಂದ ಕಸಿ ಮಾಡಲಾಯಿತು’ ಎಂದು ವಿವರಿಸಿದರು.

‘ಎರಡೂವರೆ ಗಂಟೆ ಅವಧಿಯಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದಾದ 72 ಗಂಟೆಗಳಲ್ಲಿ ಅವರ ಮೂತ್ರಪಿಂಡದ ಕಾರ್ಯನಿರ್ವಹಣೆ ಸಹಜ ಸ್ಥಿತಿಗೆ ಮರಳಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.