ಬೆಂಗಳೂರು: ಯುವಕರೊಂದಿಗೆ ಮಹಿಳೆಯರು, ಹಿರಿಯರು ಜಯಘೋಷ ಕೂಗುತ್ತ ಬೈಕ್ ಮತ್ತು ಸ್ಕೂಟರ್‌ಗಳನ್ನು ಚಲಾಯಿಸಿದರೆ, ಹಿಂದಿನಿಂದ ಜನಪದ ಕಲಾ ತಂಡಗಳು ತಮಟೆ, ಡೊಳ್ಳಿನ ನಾದದೊಂದಿಗೆ ಹೆಜ್ಜೆ ಹಾಕುತ್ತಿದ್ದವು. ಮಲೆ ಮಹಾದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವುದರೊಂದಿಗೆ ದಿನದ ಪ್ರಚಾರ ಆರಂಭಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ತೆರೆದ ವಾಹನದಲ್ಲಿ ಬೈಕ್‌ಗಳ ಹಿಂದೆ ಸಾಗುತ್ತಲೇ ಮತದಾರರನ್ನು ಸೆಳೆಯಲು ಪ್ರಯತ್ನಿಸಿದರು.
ಕೆ.ಪಿ. ಅಗ್ರಹಾರದ ಐದನೇ ಮುಖ್ಯರಸ್ತೆಯಲ್ಲಿರುವ ಮಲೆ ಮಹಾದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬೆಳಿಗ್ಗೆ 8 ಗಂಟೆಯಿಂದಲೇ ಬೈಕ್‌ಗಳು ಬಂದು ಜಮಾಯಿಸಿದವು. ರಸ್ತೆಯ ನಡುವೆಯೇ ಬೈಕ್‌ಗಳನ್ನು ನಿಲ್ಲಿಸಿದ್ದರಿಂದ ಸಾರ್ವಜನಿಕರು ಪರ್ಯಾಯ ರಸ್ತೆಯಲ್ಲಿ ಸಾಗಿದರು. ವೀರಗಾಸೆ, ಬೊಂಬೆ ಕುಣಿತ, ಡೊಳ್ಳು ಕುಣಿತ ಸೇರಿ ವಿವಿಧ ಜನಪದ ಕುಣಿತಗಳು ರ್‍ಯಾಲಿಯ ಮೆರಗನ್ನು ಹೆಚ್ಚಿಸಿದವು. ಬೈಕ್ ರ್‍ಯಾಲಿ 9 ಗಂಟೆಗೆ ಪೂರ್ವ ನಿಗದಿಯಾಗಿದ್ದರಿಂದ ದೇವಸ್ಥಾನದ ಸುತ್ತಮುತ್ತ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಬರುವಿಕೆಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಕೆಲಹೊತ್ತು ಕಾದು ಕುಳಿತರು.
9.15ರ ಹೊತ್ತಿಗೆ ಬಂದ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಹಾಗೂ ಪಕ್ಷದ ಮುಖಂಡ ಪ್ರದೀಪ್ ಕೃಷ್ಣಪ್ಪ, ದೇವಸ್ಥಾನದೊಳಗೆ ಸೌಮ್ಯಾ ರೆಡ್ಡಿ ಅವರ ಬರುವಿಕೆಗಾಗಿ ಕಾದು ಕುಳಿತರು. 9.40ರ ವೇಳೆಗೆ ಬಂದ ಸೌಮ್ಯಾ, ಮಲೆ ಮಹಾದೇಶ್ವರ ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ದೇವಸ್ಥಾನದ ಹೊರಗಡೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಅವರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ, ಪ್ರಚಾರ ಕಾರ್ಯಕ್ಕೆ ಬರಮಾಡಿಕೊಂಡರು. 10 ಗಂಟೆಗೆ ತೆರೆದ ವಾಹನ ಏರಿದ ಅವರು, ರಸ್ತೆಯ ಇಕ್ಕೆಲಗಳಲ್ಲಿನ ನಿವಾಸಿಗಳು, ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿಗೆ ಕೈಮುಗಿಯುತ್ತಲೇ ಮತಯಾಚಿಸಿದರು. ಅವರಿಗೆ ಕೃಷ್ಣಪ್ಪ ಸಾಥ್ ನೀಡಿದರು.
ಬಿಸಿಲನ್ನೂ ಲೆಕ್ಕಿಸದೆ ಕಾರ್ಯಕರ್ತರು ಬೈಕ್‌ಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯಘೋಷ ಕೂಗುತ್ತ ಸಾಗಿದರೆ, ತೆರೆದ ವಾಹನದಲ್ಲಿ ಸಾಗಿದ ಸೌಮ್ಯ ರೆಡ್ಡಿ ಮತ್ತು ಪಕ್ಷದ ಮುಖಂಡರಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ವಾಹನದ ಮೇಲ್ಭಾಗದಲ್ಲಿ ಬಟ್ಟೆಯನ್ನು ಕಟ್ಟಲಾಗಿತ್ತು. ವಾಹನ ಬರುತ್ತಿದ್ದಂತೆ ಮಹಿಳೆಯರು, ವೃದ್ಧರು, ಮಕ್ಕಳ ಸೇರಿ ವಿವಿಧ ವಯೋಮಾನದವರು ಮನೆಯ ಹೊರಗಡೆ ಬಂದು ರ್‍ಯಾಲಿಯನ್ನು ವೀಕ್ಷಿಸಿದರು. ಸೌಮ್ಯಾ ರೆಡ್ಡಿ ಅವರು ಮಂದಹಾಸದೊಂದಿಗೆ ಅವರಿಗೆ ಕೈ ಬೀಸಿದರು. ಇದೇ ವೇಳೆ ವಾಹನದಲ್ಲಿದ್ದ ಕಾಂಗ್ರೆಸ್ ಮುಖಂಡರು ಮೈಕ್ ಹಿಡಿದು, ಅಧಿಕಾರದಲ್ಲಿನ ಎನ್‌ಡಿಎ ಸರ್ಕಾರವನ್ನು ದೂಷಿಸುತ್ತಾ ಕಾಂಗ್ರೆಸ್ ಪರ ಪ್ರಚಾರ ಮಾಡಿದರು.
ಬೈಕ್ ರ್‍ಯಾಲಿಯು ಶಿವರಾಂ ಮನೆ ಸರ್ಕಲ್, ಮೋಹನ್ ಪಾರ್ಟಿ ಹಾಲ್ ಸರ್ಕಲ್, ಚೋಳರ ಪಾಳ್ಯ, ಗಣೇಶ ದೇವಸ್ಥಾನ ಸರ್ಕಲ್, ಹೊಸಹಳ್ಳಿ ಪಾರ್ಕ್, ಮಾರುತಿನಗರ ಆಸ್ಪತ್ರೆ ಕ್ಲಬ್ ರಸ್ತೆ ಮೂಲಕ ಸಾಗಿ, ಹಂಪಿನಗರ, ಅತ್ತಿಗುಪ್ಪೆ, ಚಂದ್ರಾಲೇಔಟ್, ಇಂದಿರಾ ಕಾಲೊನಿ, ದೀಪಾಂಜಲಿನಗರ, ಆವಲಹಳ್ಳಿ, ಗುಡ್ಡದಹಳ್ಳಿ ಆಂಜನೇಯ ದೇವಸ್ಥಾನ, ಶಾಮಣ್ಣ ಗಾರ್ಡನ್ ಮೂಲಕ ಹಾದು ಹೋಗಿ, ಬೀರೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತ್ಯವಾಯಿತು. ಮಾರ್ಗ ಮಧ್ಯದಲ್ಲಿ ಸಾರಿಗೆ ಸಚಿವ ಹಾಗೂ ಸೌಮ್ಯಾ ರೆಡ್ಡಿ ಅವರ ತಂದೆ ರಾಮಲಿಂಗಾರೆಡ್ಡಿ, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ರ್‍ಯಾಲಿಯಲ್ಲಿ ಸೇರಿಕೊಂಡರು.
ರ್‍ಯಾಲಿ ಪ್ರಾರಂಭದಲ್ಲಿ ಪಾಲ್ಗೊಂಡಿದ್ದ ಬೈಕ್ ಸವಾರರಲ್ಲಿ ಕೆಲವರು ಮಾರ್ಗ ಮಧ್ಯದಲ್ಲಿ ಅಡ್ಡ ರಸ್ತೆಯ ಮೂಲಕ ತೆರಳಿದರೆ, ಕೆಲವರು ವಿವಿಧ ವೃತ್ತಗಳಲ್ಲಿ ರ್‍ಯಾಲಿಯನ್ನು ಸೇರಿಕೊಂಡರು.
ಮಠ ದೇವಸ್ಥಾನಕ್ಕೆ ಭೇಟಿ
ಸೌಮ್ಯಾ ರೆಡ್ಡಿ ಅವರು ಬೆಳಿಗ್ಗೆ ರ್‍ಯಾಲಿಗೆ ಬರುವ ಮೊದಲು ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ವೇಮನಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಅವರೊಂದಿಗೆ ಚರ್ಚಿಸಿದರು. ಸಂಜೆ ಜಯನಗರದ ರಾಘವೇಂದ್ರ ಸ್ವಾಮಿ ಮಠ ಹಾಗೂ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಠ ಹಾಗೂ ದೇವಸ್ಥಾನದ ಸುತ್ತಮುತ್ತಲಿನ ಸ್ಥಳಗಳಿಗೆ ತೆರಳಿ ಮತ ಯಾಚಿಸಿದರು.
‘ಸರ್ವಾಧಿಕಾರಿ ಧೋರಣೆ’
‘ಕಾಂಗ್ರೆಸ್ ಪಕ್ಷವು ಎಲ್ಲ ಜಾತಿ ಧರ್ಮವನ್ನು ಒಳಗೊಂಡಿದೆ. ಬೇರೆ ಪಕ್ಷದವರು ಧರ್ಮ ಜಾತಿ ಮತ್ತು ಭಾಷೆಯ ವಿಚಾರವಾಗಿ ಒಲೈಕೆ ಮಾಡುವುದನ್ನು ನೋಡಬಹುದಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆ ತಾಳಿದೆ. ಇಲ್ಲಿನ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ. ನಮ್ಮ ರಾಜ್ಯವು ಬರದಿಂದ ತತ್ತರಿಸಿದೆ. ಆದರೆ ಯಾವುದೇ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಈ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿಯೆತ್ತಲು ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸಬೇಕು’ ಎಂದು ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಮನವಿ ಮಾಡಿಕೊಂಡರು.
‘ತೆರಿಗೆ ವಿಚಾರದಲ್ಲಿ ಮೋಸ’
‘ತೆರಿಗೆ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಮೋಸ ಮಾಡಿದೆ. ಮಹಾರಾಷ್ಟ್ರ ಬಳಿಕ ನಮ್ಮ ರಾಜ್ಯವೇ ಅಧಿಕ ತೆರಿಗೆಯನ್ನು ಪಾವತಿಸುತ್ತಿದೆ. ಆದರೆ ಶೇ 13ರಷ್ಟು ಹಣ ಮಾತ್ರ ಮರಳಿ ಬರುತ್ತಿದೆ. ನಮ್ಮ ರಾಜ್ಯದಲ್ಲಿಯೂ ನೀರಾವರಿ ಯೋಜನೆಗಳ ಅನುಷ್ಠಾನ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ನಮ್ಮ ಪಾಲು ನಮಗೆ ಸಿಗುವಂತಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಸೌಮ್ಯಾ ರೆಡ್ಡಿ ಮನವಿ ಮಾಡಿಕೊಂಡರು. ‘ಕ್ಷೇತ್ರದ ಬಿಜೆಪಿ ಸಂಸದರನ್ನು ಕಳೆದ ಐದು ವರ್ಷಗಳಿಂದ ನೋಡಿದ್ದೀರಾ? ಅವರ ಕೊಡುಗೆ ಏನು ಏನ್ನುವುದೂ ತಿಳಿಯದಾಗಿದೆ. ಅವರನ್ನು ಆಯ್ಕೆ ಮಾಡಿದ ಜನರಿಗೆ ಅವರು ಅನ್ಯಾಯ ಮಾಡಿದ್ದಾರೆ. ಈ ಚುನಾವಣೆ ಕನ್ನಡಿಗರ ಸ್ವಾಭಿಮಾನದ ಚುನಾವಣೆ. ರಾಜ್ಯ ಬೆಂಗಳೂರಿನಲ್ಲಿ ಸೌಹಾರ್ದತೆ ಬರಲು ಕಾಂಗ್ರೆಸ್ ಅಗತ್ಯ. ಗ್ಯಾರಂಟಿಗಳಿಂದಾಗಿ ನಮ್ಮ ಪರ ಅಲೆಯಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.