ADVERTISEMENT

ಬೆಂಗಳೂರು–ನವದೆಹಲಿ ರೈಲು: 10 ನಿಮಿಷದಲ್ಲಿ ಟಿಕೆಟ್ ಮಾರಾಟ

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:50 IST
Last Updated 11 ಮೇ 2020, 19:50 IST
ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಟಿಕೆಟ್‌ ಪಡೆಯುತ್ತಿರುವ ದೃಶ್ಯ
ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಟಿಕೆಟ್‌ ಪಡೆಯುತ್ತಿರುವ ದೃಶ್ಯ    

ಬೆಂಗಳೂರು: ಬೆಂಗಳೂರು–ನವದೆಹಲಿ ನಡುವೆ ಪ್ರಯಾಣಿಕರ ವಿಶೇಷ ರೈಲು ಸಂಚಾರ ಮಂಗಳವಾರದಿಂದ ಆರಂಭವಾಗಲಿದ್ದು, ಟಿಕೆಟ್ ಬುಕ್ಕಿಂಗ್ ಆರಂಭವಾಗಿ 10 ನಿಮಿಷದಲ್ಲಿ ಎಲ್ಲಾ ಟಿಕೆಟ್‌ ಮಾರಾಟವಾಗಿವೆ.

ಸೋಮವಾರ ಸಂಜೆ 4 ಗಂಟೆಗೆ ಟಿಕೆಟ್ ಬುಕ್ಕಿಂಗ್ ಆರಂಭವಾಯಿತು. ಅದಕ್ಕಾಗಿ ಕಾದು ಕುಳಿತಿದ್ದ ಪ್ರಯಾಣಿಕರು ಆತುರದಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ. ಬೆಂಗಳೂರಿನಿಂದ ನವದೆಹಲಿಗೆ ಮೇ 17ರ ತನಕ ಟಿಕೆಟ್ ಬುಕ್ಕಿಂಗ್ ಮುಕ್ತಾಯವಾಗಿದೆ.

ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್‌(ಐಆರ್‌ಸಿಟಿಸಿ) ವೆಬ್‌ಸೈಟ್‌ನಲ್ಲಿ4 ಗಂಟೆಗೆ ಬುಕ್ಕಿಂಗ್ ಆರಂಭವಾದರೂ ಸ್ವಲ್ಪ ಹೊತ್ತಿನಲ್ಲೇ ವೆಬ್‌ಸೈಟ್ ಕ್ರ್ಯಾಷ್ ಆಯಿತು. 5.30ರ ತನಕ ವೆಬ್‌ಸೈಟ್ ಆರಂಭವಾಗಲೇ ಇಲ್ಲ. ‘ಹೆಚ್ಚಿನ ಸಂಖ್ಯೆಯಲ್ಲಿ ಜನರು ವೆಬ್‌ಸೈಟ್‌ಗೆ ಭೇಟಿ ಕೊಟ್ಟ ಕಾರಣ ಹೀಗಾಗಿರಬಹುದು’ ಎಂದು ಹೆಸರು ಬಹಿರಂಗಗೊಳಿಸಲು ಬಯಸದ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಂಚಾರ ವಿವರ: 02691 ಸಂಖ್ಯೆಯ ವಿಶೇಷ ರೈಲು ಬೆಂಗಳೂರಿನಿಂದ ಮಂಗಳವಾರ ರಾತ್ರಿ 8.30ಕ್ಕೆ ಹೊರಡಲಿದ್ದು, ಅನಂತಪುರ, ಗುಂಟಕಲ್, ಸಿಕಿಂದರಾಬಾದ್, ನಾಗ್ಪುರ, ಭೂಪಾಲ್‌, ಝಾನ್ಸಿಯಲ್ಲಿ ನಿಲುಗಡೆಯಾಗಲಿದೆ. ಗುರುವಾರ ಬೆಳಿಗ್ಗೆ 5.55ಕ್ಕೆ ನವದೆಹಲಿ ತಲುಪಲಿದೆ.

02692 ಸಂಖ್ಯೆಯ ರೈಲು ದೆಹಲಿಯಿಂದ ಗುರುವಾರ(ಮೇ 14) ರಾತ್ರಿ 9.15 ‌ಗಂಟೆಗೆ ಹೊರಟು ಮೇ 16ರಂದು ಬೆಳಿಗ್ಗೆ 6.40 ಗಂಟೆಗೆ ಬೆಂಗಳೂರು ತಲುಪಲಿದೆ. ಒಂದು ರೈಲಿನಲ್ಲಿ1,076 ಜನರ ಪ್ರಯಾಣಕ್ಕೆ ಅವಕಾಶ ಇದೆ.

ನವದೆಹಲಿಯಿಂದ ಬೆಂಗಳೂರಿಗೆ ಬಂದಿಳಿಯಲಿರುವ ಪ್ರಯಾಣಿಕರನ್ನು ಕ್ವಾರಂಟೈನ್‌ನಲ್ಲಿ ಇಡಬೇಕೇ, ಬೇಡವೇ ಎಂಬುದರ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ.ಹೊರ ರಾಜ್ಯದಿಂದ ಬರುವ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದ್ದು, ರೈಲು ಪ್ರಯಾಣಿಕರಿಗೂ ಇದೇ ಮಾದರಿ ಅನುಸರಿಸುವ ಸಾಧ್ಯತೆ ಇದೆ. ಆದರೆ, ಸರ್ಕಾರ ಇನ್ನೂ ಸ್ಪಷ್ಟ ನಿಲುವಿಗೆ ಬಂದಿಲ್ಲ.

‘ಈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿ ಅವರು ಪ್ರಧಾನಮಂತ್ರಿಯವರ ಜತೆ ಸಂವಾದ ನಡೆಸಿದ್ದು, ಮಂಗಳವಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.